ಸುರತ್ಕಲ್: ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಬಾವಾ.! ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಬಾವಾ.! ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಸುರತ್ಕಲ್: ಇಲ್ಲಿನ ಜಂಕ್ಷನ್ ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇದಕ್ಕಾಗಿ ಕಾರ್ ಪಾರ್ಕಿಂಗ್ ಸ್ಥಳದ ಸಮೀಪದ ಮರ ಕಡಿಯುತ್ತಿದ್ದ ವೇಳೆ ಮಾಜಿ ಶಾಸಕ ಮೊಯಿದೀನ್ ಬಾವಾ ತಡೆಯೊಡ್ಡಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಎರಡು ಮರಗಳಿದ್ದು ಅಭಿವೃದ್ಧಿ ದೃಷ್ಟಿಯಿಂದ ಇದರ ತೆರವು ಮಾಡುವುದು ಅನಿವಾರ್ಯವಾಗಿತ್ತು. ರಾತ್ರಿ ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಬಾವಾ ಅಡ್ಡಿಪಡಿಸಿ ಮರ ಕಡಿಯದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕ ಮೊಯಿದೀನ್ ಬಾವಾ ಅವಧಿಯಲ್ಲಿ ಸುರತ್ಕಲ್ ಕೃಷ್ಣಾಪುರ ರಸ್ತೆ ಅಭಿವೃದ್ಧಿ ಸಂದರ್ಭ ಕಾಂತೇರಿ ಧೂಮಾವತಿ ದೈವಸ್ಥಾನ ಬಳಿ ಬೆಳೆದಿದ್ದ ಭಾರೀ ಗಾತ್ರದ 10ಕ್ಕೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿದ್ದರು. ಆ ಬಳಿಕ ರಸ್ತೆ ಮೇಲ್ದರ್ಜೆಗೇರಿದ್ದು ಅಲ್ಲಿ ಬಿಸಿಲಿನಲ್ಲಿ ನಡೆದಾಡುವುದು ಅಸಾಧ್ಯವಾಗಿದೆ. ಇಂದಿಗೂ ಪರ್ಯಾಯವಾಗಿ ಒಂದೂ ಸಸಿ ನೆಟ್ಟು ಬೆಳೆಸಿಲ್ಲ. ಹೀಗಿರುವಾಗ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮರ ಕಡಿಯುವುದಕ್ಕೆ ಬಾವಾ ಅಡ್ಡಿಪಡಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಹಿಂದೂ ದೇವಸ್ಥಾನ ಹೆಸರಲ್ಲಿ "ರಾಜಕೀಯ"!

ಮರ ಕಡಿಯಲು ಅಡ್ಡಿಪಡಿಸಿರುವ ಬಾವಾ ಅದಕ್ಕಾಗಿ ಸ್ಥಳೀಯ ಹಿಂದೂ ದೇವಸ್ಥಾನವನ್ನು ಎಳೆದು ತಂದಿರುವ ಆರೋಪ ವ್ಯಕ್ತವಾಗಿದೆ. ಮರ ಕಡಿಯಬಾರದು ಅಲ್ಲಿ ಮಹಮ್ಮಾಯಿ ದೇವರನ್ನು ಕೂರಿಸುತ್ತಾರೆ, ಮರ ಕಡಿದರೆ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯಾಗುತ್ತದೆ, ಭರತ್ ಶೆಟ್ಟಿ ಅವರು ಹಿಂದೂ ವಿರೋಧಿ ಎಂದು ಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿ, ಅಲ್ಲಿ ಖಾಲಿ ಜಾಗವಿದ್ದ ಕಾರಣ ಟೆಂಟ್ ಹಾಕಿ ದೇವರನ್ನು ಇರಿಸುತ್ತಿದ್ದೆವು.

ಅಭಿವೃದ್ಧಿ ದೃಷ್ಟಿಯಿಂದ ಮರ ಕಡಿಯುವುದಕ್ಕೆ ಸಮಸ್ಯೆಯಿಲ್ಲ ಎಂದಿದ್ದಾರೆ. ಮೊಯಿದೀನ್ ಬಾವಾ ಅವರು ಸದ್ಯ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುತ್ತದೆಯೇ ಇಲ್ಲವೇ ಎಂಬ ಟೆನ್ಶನ್ ನಲ್ಲಿದ್ದಾರೆ. ಹೀಗಾಗಿ ಸಣ್ಣಪುಟ್ಟ ವಿಷಯ ಎಳೆದುತಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುರತ್ಕಲ್ ಜಂಕ್ಷನ್ ನಲ್ಲಿ ಸರ್ವಿಸ್ ರಸ್ತೆ ತೀರಾ ನಾದುರಸ್ತಿಯನ್ನು ತಲುಪಿದ್ದು ಅಭಿವೃದ್ಧಿಯಾಗುತ್ತಿರುವ ಈ ವೇಳೆ ಅಡ್ಡಿಪಡಿಸಿರುವ ಬಾವಾ ಈ ಬಾರಿ ಚುನಾವಣೆಗೆ ಒಂದೊಮ್ಮೆ ಟಿಕೆಟ್ ಸಿಕ್ಕರೂ ಇರುವ ವೋಟ್ ಗಳನ್ನು ಕಳೆದುಕೊಳ್ಳಲಿದ್ದಾರೆ ಅನ್ನುತ್ತಾರೆ ಉತ್ತರದ ಮತದಾರರು.