ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನ ಖರೀದಿಗೆ ಹೊರಟಿದ್ದ ಅಪ್ಪ - ಹತ್ತು ಲಕ್ಷ ದೋಚಿದ ಕಳ್ಳ.!

10 ಲಕ್ಷ ರೂ. ದರೋಡೆ - ಮಗಳ ಮದುವೆಗಾಗಿ ಚಿನ್ನ ಖರೀದಿಗೆ ತೆರಳುತ್ತಿದ್ದಾಗ ಕೃತ್ಯ

ಉಪ್ಪಿನಂಗಡಿ: ವ್ಯಕ್ತಿಯೋರ್ವರ ಕೈಯಲ್ಲಿದ್ದ 10 ಲಕ್ಷ ರೂ. ಚೀಲವನ್ನು ಅಪರಿಚಿತ ವ್ಯಕ್ತಿಯೋರ್ವ ಕಸಿದು ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪೆದಮಲೆ- ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಮಾ. 20ರಂದು ಮಧ್ಯಾಹ್ನ ನಡೆದಿದೆ.

ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮುಹಮ್ಮದ್‌ ಕೆ. ಎಂಬವರು ಹಣ ಕಳೆದುಕೊಂಡವರು.

ಮುಹಮ್ಮದ್‌ ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂ.ವನ್ನು ಬಟ್ಟೆಯ ಚೀಲದಲ್ಲಿ ತುಂಬಿಸಿದ ಹಣವನ್ನು ಅವರು ದ್ವಿಚಕ್ರ ವಾಹನದ ಸೀಟಿನ್ನೆತ್ತಿ ಅದರಲ್ಲಿ ಇಡುತ್ತಿದ್ದಂತೆಯೇ ಮುಹಮ್ಮದ್‌ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದಾನೆ.

ಮುಹಮ್ಮದ್‌ ಅವರು ಈತನನ್ನು ಸ್ವಲ್ಪ ದೂರದವರೆಗೆ ಬೆನ್ನಟ್ಟಿಕೊಂಡು ಹೋಗಿದ್ದು, ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ದರೋಡೆಕೋರ ಪ್ಯಾಂಟ್‌ ಹಾಗೂ ಟೀ ಶರ್ಟ್‌ ಧರಿಸಿದ್ದ ಎಂದು ಮುಹಮ್ಮದ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಮುಹಮ್ಮದ್‌ ಅವರು ದರೋಡೆಗೊಳಗಾದ ವಿಷಯವನ್ನು ಸಂಬಂಧಿಕರಿಗೆ ತಿಳಿಸಿ, ಚರ್ಚಿಸಿ ಪೊಲೀಸ್‌ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.