ಪುತ್ತೂರು: ಬಿಜೆಪಿ ಕಾರ್ಯಕರ್ತರಿಗೆ ಮನಬಂದಂತೆ ಥಳಿಸಿದ ಪೊಲೀಸರು.!!

ನಳೀನ್ ಕಟೀಲ್ ಹಾಗೂ ಡಿವಿ ಸದಾನಂದ ಗೌಡ ಫೋಟೋಗೆ ಚಪ್ಪಲಿ ಹಾರ ಪ್ರಕರಣ

ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೊವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು ಮನಬಂದಂತೆ ಥಳಿಸಿ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

ಯುವಕರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ, ಗಾಯಗೊಳಿಸಿದ ಫೋಟೊ ಹಾಗು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇ.14ರಂದು ರಾತ್ರಿ ಪುತ್ತೂರು ನಗರ ಸಭೆ ವ್ಯಾಪ್ತಿಯ ಪುತ್ತೂರು ಅರಣ್ಯ ಇಲಾಖೆಯ ಆವರಣ ಗೋಡೆಯ ಬಳಿ ಬಿಜೆಪಿ ಮುಖಂಡರಾದ ಡಿ. ವಿ. ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವ ಚಿತ್ರವುಳ್ಳ ಬ್ಯಾನರ್ ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಆ ಬ್ಯಾನರ್ ನಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ನಾಯಕರಿಗೆ ಶ್ರದ್ಧಾಂಜಲಿ ಎಂದು ಬರೆಯಲಾಗಿತ್ತು ಈಬಗ್ಗೆ ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪುತ್ತೂರು ನಗರ ಠಾಣೆಗೆ ಸರ್ಕಾರಿ ಆಸ್ತಿಪಾಸ್ತಿಯನ್ನು ಮತ್ತು ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿರುವುದಾಗಿ ದೂರು ನೀಡಿದ್ದರು.

ಮೇ. 15 ರಂದು ಈ ಬ್ಯಾನರ್ ಅಳವಡಿಕೆಯ ವಿರುದ್ಧ ಪುತ್ತೂರಿನಲ್ಲಿ ಬಿಜೆಪಿಯು ಪ್ರತಿಭಟನೆಯನ್ನು ನಡೆಸಿತ್ತು. ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾಧವ ಎಂಬವರನ್ನು ಪ್ರಾರಂಭದಲ್ಲಿ ವಶಕ್ಕೆ ಪಡೆದುಕೊಂಡ ಪೊಲೀಸರು ಮೇ.15 ರಂದು ರಾತ್ರಿ ನರಿಮೊಗರು ನಿವಾಸಿಗಳಾದ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೆಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ವಿಚಾರಣೆಯ ನೆಪದಲ್ಲಿ ಪೊಲೀಸರು ವಶಕ್ಕೆ ಪಡೆದವರ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಥಳಿತದಿಂದ ಗಾಯಗೊಂಡ ಯುವಕರ ರಕ್ತಸಿಕ್ತ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಛೇರಿಯಿಂದ ನಡೆದಾಡಲೂ ಕಷ್ಟ ಪಡುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಕಾಣಿಸುತ್ತಿದೆ. ಫೋಟೊದಲ್ಲಿ ಬೆನ್ನು ಸೊಂಟದ ಹಿಂಭಾಗದಲ್ಲಿ ಥಳಿಸಿರುವುದು ಕಾಣುತ್ತಿದೆ. ಹಲ್ಲೆಗೊಳಗಾದ ಯುವಕರು ಕಟ್ಟಾ ಬಿಜೆಪಿ ಕಾರ್ಯಕರ್ತರಾಗಿದ್ದು, ಅದರಲ್ಲಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗಿದ್ದರು. ಉಳಿದವರು ಬಿಜೆಪಿಯ ಪರವೇ ಪ್ರಚಾರ ನಡೆಸಿದ್ದರು ಎಂದು ತಿಳಿದು ಬಂದಿದೆ. ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಬಿಜೆಪಿ ಮುಖಂಡರ ಚಿತಾವಣೆಯಿಂದ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೇ ದೌರ್ಜನ್ಯದ ನೇತ್ರತ್ವ ವಹಿಸಿದ್ದು, ಸಾರ್ವಜನಿಕ ವಲಯದಲ್ಲಿ ದಿಗ್ಧಮೆಗೊಳಗಾಗಿದ್ದಾರೆ. ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಮನಿಸಿದ ನೆಟ್ಟಿಗರು, ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.