ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕಕ್ಕೆ ಕಾಂಗ್ರೆಸ್ ಸರಕಾರ ನಿರ್ಧಾರ

ಮಾನವೀಯತೆ ಆಧಾರದಲ್ಲಿ ಪ್ರವೀಣ್‌ ನೆಟ್ಟಾರು ಪತ್ನಿಯನ್ನು ಮರು ನೇಮಕ ಮಾಡಲಾಗುವುದು' - ಸಿಎಂ

ಮಂಗಳೂರು : ಹೊಸ ಸರಕಾರ ಬಂದ ಹಿನ್ನಲೆ ಬಿಜೆಪಿ ಮುಖಂಡ ದಿವಂಗತ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಹಿಂದಿನ ಬಿಜೆಪಿ ಸರಕಾರ ನೀಡಿದ್ದ ಗುತ್ತಿಗೆ ಆಧಾರಿತ ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ವಿಚಾರದಲ್ಲಿ ಬಿಜೆಪಿ ಕಾಂಗ್ರೇಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿತ್ತು.

ಆದರೆ ಇದೀಗ ಈ ವಿಚಾರಕ್ಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಪತ್ನಿ ಮಾತ್ರವಲ್ಲ, ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮಾನವೀಯತೆ ಆಧಾರದಲ್ಲಿ ನೂತನಾ ಕುಮಾರಿ ಅವರ ಮರುನೇಮಕ ಮಾಡಲಾಗುವುದು ಎಂದಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ನಂತರ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ತಮ್ಮ ಕಚೇರಿಯಲ್ಲಿ ನೆಟ್ಟಾರು ಪತ್ನಿಗೆ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ಕೊಡಿಸಿದ್ದರು. ಬಳಿಕ ಅವರ ಕೋರಿಕೆಯಂತೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿಗದಿಪಡಿಸಲಾಯಿತು. ಇದೀಗ ಸರಕಾರ ಬದಲಾಗಿದೆ. ಸಹಜವಾಗಿಯೇ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡಿದ್ದ 150ಕ್ಕೂ ಅಧಿಕ ಮಂದಿಯಲ್ಲಿ ನೆಟ್ಟಾರು ಪತ್ನಿ ನೂತನ ಕುಮಾರಿಯೂ ಕೆಲಸ ಕಳೆದುಕೊಂಡಿದ್ದಾರೆ. ಆದರೆ ಇದು ರಾಜಕೀಯ ಪಡಸಾಲೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಉದ್ದೇಶಪೂರ್ವಕವಾಗಿ ನೆಟ್ಟಾರು ಪತ್ನಿಯ ಕೆಲಸವನ್ನು ತೆಗೆಯಲಾಗಿದೆ ಎಂಬ ವಿಚಾರ ಬಂತು. ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.