ಬಿಪರ್​ಜಾಯ್ ಚಂಡಮಾರುತ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಬಿಪರ್​ಜಾಯ್ ಚಂಡಮಾರುತ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು ಈ ಚಂಡಮಾರುತಕ್ಕೆ ಬಿಪರ್​ಜಾಯ್ ಎಂದು ಹೆಸರಿಡಲಾಗಿದೆ. ಈ ಚಂಡಮಾರುತದಿಂದಾಗಿ ಕರ್ನಾಟಕದಲ್ಲೂ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರುಮಳೆಯ ಹಿನ್ನಡೆ ನಡುವೆ ಅರಬ್ಬಿ ಸಮುದ್ರದಲ್ಲಿ ಬಿಪರ್​ಜಾಯ್ ಚಂಡಮಾರುತ ರೂಪುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ . ರಾಜ್ಯದ ಕರಾವಳಿ ಪ್ರದೇಶದಲ್ಲಿ ಇದೇ 6ರಿಂದ 11ರವರೆಗೆ ಭಾರಿ ಮಳೆ ಯಾಗಲಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ‌ ಇಲಾಖೆ‌ ಮುನ್ನೆಚ್ಚರಿಕೆ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.

ಇದೇ 6ರಿಂದ 11ರವರೆಗೆ ಭಾರಿ ಮಳೆಯಾಗುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಈ ಅವಧಿಯಲ್ಲಿ ನೀರು ನಿಲ್ಲುವ ತಗ್ಗು ಪ್ರದೇಶ, ಕರೆ, ನದಿ ತೀರ, ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು.

ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಮಾಡಿದ್ದಾರೆ.

ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ತೀರಗಳಿಗೆ ಅಥವಾ ಸಮುದ್ರತೀರಕ್ಕೆ ತೆರಳದಂತೆ ಎಚ್ಚರಿಕೆವಹಿಸಬೇಕು. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾದರೆ ಪರಿಹಾರಕ್ಕೆ ಸಹಾಯವಾಣಿಯನ್ನು ( 1077 ಅಥವಾ 0824 2442590) ಸಂಪರ್ಕಿಸಬಹುದು’ ಎಂದು ಅವರು ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.