ಮಂಗಳೂರು: ಜನರ ನೆಮ್ಮದಿ ಹಾಳು ಮಾಡಿದ ಅಣಬೆ ಪ್ಯಾಕ್ಟರಿ ವಿರುದ್ಧ ಪ್ರತಿಭಟನೆ

ಅಣಬೆ ಪ್ಯಾಕ್ಟರಿ ದುರ್ವಾಸನೆ : ಅನಿರ್ದಿಷ್ಟಾವಧಿ ಮುಷ್ಕರ

ಮಂಗಳೂರು : ಅಣಬೆ ಪ್ಯಾಕ್ಟರಿಯ ದುರ್ವಾಸನೆಯಿಂದಾಗಿ ಪರಿಸರದ ಜನರು ಬೇಸತ್ತ ಜನ ಪ್ಯಾಕ್ಟರಿ ವಿರುದ್ದ ಪ್ರತಿಭಟನೆ ಮಾಡಿದ ಘಟನೆ ವಾಮಂಜೂರು ಓಂಕಾರನಗರದಲ್ಲಿ ನಡೆದಿದೆ.

ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಅಣಬೆ ಪ್ಯಾಕ್ಟರಿಯ ದುರ್ವಾಸನೆಯಿಂದಾಗಿ ಪರಿಸರದ ಜನರು ಬೇಸತ್ತಿದ್ದು, ಇದೀಗ ಪ್ಯಾಕ್ಟರಿ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ವಾಮಂಜೂರು ಓಂಕಾರನಗರದಲ್ಲಿ ‘ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ’ ಹೆಸರಿನ ಅಣಬೆ ಫ್ಯಾಕ್ಟರಿಯಿಂದ ಹೊರಸೂಸುವ ದುರ್ವಾಸನೆ ಸ್ಥಳೀಯ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ.

ಈ ಫ್ಯಾಕ್ಟರಿ ವಿರೋಧಿಸಿ ಅಂಬೇಡ್ಕರ್‌ನಗರ, ಆಶ್ರಯನಗರ, ತೊೖಪೆಕಲ್ಲು, ಜ್ಯೋತಿನಗರ, ಪರಾರಿ, ಕೊಳಕೆಬೈಲು, ಅಮೃತನಗರ, ದೇವಿಪ್ರಸಾದ್‌ ಕಂಪೌಂಡ್‌, ತಿರುವೈಲು, ಕೆಲರೈಕೋಡಿ, ಕೆಎಚ್‌ಬಿ ಲೇಔಟ್‌ ಮತ್ತಿತರ ಪ್ರದೇಶಗಳ ನಿವಾಸಿಗರು ಬೀದಿಗಿಳಿದು ಪ್ರತಿಭಟನೆ ಮಾಡಿದರೂ ಆಡಳಿತದವರು ಕ್ರಮ ಕೈಗೊಂಡಿಲ್ಲ. ಹಾಗಾಗಿ ಇಂದು ಬೆಳಗ್ಗೆ ಫ್ಯಾಕ್ಟರಿ ಎದುರು ‘ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಫ್ಯಾಕ್ಟರಿ ಹೋರಾಟ ಸಮಿತಿ’ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ.

ವಾಮಂಜೂರಿನ ವ್ಯಾಪಾರಿಗಳು ಕೂಡಾ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಕುಡಿಯುವ ನೀರಿನ ಫ್ಯಾಕ್ಟರಿ ಎಂದು ಸ್ಥಳೀಯರಿಗೆ ನಂಬಿಸಿ ಬಳಿಕ ಅಣಬೆ ಫ್ಯಾಕ್ಟರಿಯಾಗಿ ಮಾರ್ಪಾಡು ಮಾಡಲಾಯಿತು ಎನ್ನುವುದು ಸ್ಥಳೀಯರ ಆರೋಪ. ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಸ್ಥಳೀಯ ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್‌ ಒತ್ತಾಯಿಸಿದರು. ಎಸಿಪಿ ಪರಮೇಶ್ವರ ಎ. ಹೆಗಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.