71ನೇ ಮಿಸ್ ವಲ್ಡ್ ಗೆ ಭಾರತ ಆತಿಥ್ಯ - 27 ವರ್ಷಗಳ ಬಳಿಕ ಅವಕಾಶ

71ನೇ ಮಿಸ್ ವಲ್ಡ್ ಗೆ ಭಾರತ ಆತಿಥ್ಯ - 27 ವರ್ಷಗಳ ಬಳಿಕ ಅವಕಾಶ

71ನೇ ವಿಶ್ವ ಸುಂದರಿ 2023 ಸ್ಪರ್ಧೆಗೆ ಭಾರತವನ್ನು ಅತಿಥೇಯ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದ್ದು, 27 ವರ್ಷಗಳ ಬಳಿಕ ಮತ್ತೊಮ್ಮೆ ʼಮಿಸ್‌ ವರ್ಲ್ಡ್‌ʼ ಆತಿಥ್ಯ ಭಾರತದ ಪಾಲಿಗೆ ಒದಗಿ ಬಂದಿದೆ.

ಭಾರತವು ಕೊನೆಯದಾಗಿ 1996 ರಲ್ಲಿ ಸ್ಪರ್ಧೆಯನ್ನು ಆಯೋಜಿಸಿತ್ತು.ಬೆಂಗಳೂರಿನಲ್ಲಿ ನಡೆದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗ್ರೀಸ್‌ನ ಐರೀನ್‌ ಸ್ಕಿಲ್ವಾ ವಿನ್ನರ್‌ (Irene Skliva) ಆಗಿದ್ದರು.

ಭಾರತದಲ್ಲಿ ನಡೆಯುವ ಸ್ಪರ್ಧೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

"71ನೇ ವಿಶ್ವ ಸುಂದರಿ ಫೈನಲ್‌ ಆತಿಥೇಯ ಭಾರತ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ನೀಡಿದ ಮೊದಲ ಕ್ಷಣದಿಂದ ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ! ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಪ್ರಪಂಚದ ಉಳಿದ ಭಾಗಗಳೊಂದಿಗೆ ಸ್ಪರ್ಧಿಸುವ ತಾಣಗಳನ್ನು ಭಾರತ ಹೊಂದಿದೆ

ಒಂದು ತಿಂಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತಮ್ಮ ಅನನ್ಯ ಪ್ರತಿಭೆ, ಕ್ರೀಡಾ ಸವಾಲು , ದತ್ತಿ ಕಾರ್ಯಕ್ರಮ ಹಾಗೂ ಬುದ್ಧಿವಂತಿಕೆ ಮತ್ತು ಚೆಲುವನ್ನು ಪ್ರದರ್ಶಿಸಲಿದ್ದಾರೆ ʼʼ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ, ಉಡುಪಿ ಮೂಲದ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದರು.