ಸಿದ್ದರಾಮಯ್ಯ ವಿರುದ್ಧ ಹೇಳಿಕೆ ಆರೋಪ: ಶಾಸಕ ಪೂಂಜಾಗೆ ರಿಲೀಫ್, ತನಿಖೆಗೆ ಹೈಕೋರ್ಟ್ ತಡೆ!

ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಶಾಸಕ ಪೂಂಜಾಗೆ ರಿಲೀಫ್, ತನಿಖೆಗೆ ಹೈಕೋರ್ಟ್ ತಡೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ಎಂದು ಆರೋಪ ಹೊತ್ತಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿದ್ದರಾಮಯ್ಯ 24 ಹಿಂದೂಗಳನ್ನು ಹತ್ಯೆ ಮಾಡಿದ್ದಾರೆಂಬ ಹೇಳಿಕೆ ಪ್ರಕರಣ ಕುರಿತ ತನಿಖಗೆ ಕರ್ನಾಟಕ ಹೈಕೋರ್ಟ್ ಮದ್ಯಂತರ ತಡೆ ನೀಡಿದೆ. ಈ ಕುರಿತು ಪೂಂಜಾ ಪರ  ಹಿರಿಯ ವಕೀಲ ಪ್ರಭುಲಿಂಗ್ ನಾವಡಗಿ  ಸಮರ್ಥವಾಗಿ ವಾದ ಮಂಡಿಸಿದ್ದಾರೆ.

ಐಪಿಸಿ ಸೆ.153 ಎ ಅಡಿ ಕೇಸ್ ದಾಖಲಿಸಲು ಪ್ರಕರಣ ಯೋಗ್ಯವಾಗಿಲ್ಲ. ಕಾರಣ ಹರೀಶ್ ಪೂಂಜಾ ವಿರುದ್ದ ವಿಳಂಬವಾಗಿ ದೂರು ದಾಖಲಿಸಲಾಗಿದೆ. ಪೂಂಜಾ ಹೇಳಿಕೆ ನೀಡಿದ ಬಳಿಕ ಯಾವುದೇ ಶಾಂತಿಭಂಗದ ಕೃತ್ಯ ನಡೆದಿಲ್ಲ. ಈ ಹೇಳಿಕೆ ಪ್ರಚೋದನೆ ಸಷ್ಟಿಸಿಲ್ಲ ಎಂದು ಪ್ರಭುಲಿಂಗ ನಾವಡಗಿ ವಾದ ಮಂಡಿಸಿದ್ದಾರೆ. ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್ ತನಿಖೆಗೆ ಮದ್ಯಂತರ ತಡೆ ನೀಡಿದೆ.

ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಹರೀಶ್‌ ಪೂಂಜ, ಮುಖ್ಯಮಂತ್ರಿ ಸಿದ್ದರಾಮಯ್ಯ 24 ಕಾರ್ಯಕರ್ತರನ್ನು ಹತ್ಯೆ ಮಾಡಿರುವುದಾಗಿ ತುಳುವಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಈ ಭಾಷಣದ ಬೆನ್ನಲ್ಲೇ, ಪೂಂಜ ವಿರುದ್ಧ ಪುತ್ತೂರು ,  ಬೆಳ್ತಂಗಡಿ ಹಾಗೂ ಬಂಟ್ವಾಳ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು.

ಪೂಂಜಾ ಭಾಷಣದ ವಿಡಿಯೋವನ್ನು ದೂರಿನ ವೇಳೆ ಪೊಲೀಸರಿಗೆ ಸಲ್ಲಿಕೆ ಮಾಡಲಾಗಿತ್ತು. ಬೆಳ್ತಂಗಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ದೂರು ದಾಖಲಿಸಿತ್ತು. ಇತ್ತ ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಬೇಬಿ ಕುಂದರ್‌ ದೂರು ದಾಖಲಿಸಿದ್ದರು.  ಮುಖ್ಯಮಂತ್ರಿಗಳ ವಿರುದ್ಧ ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ. ಆದ್ದರಿಂದ ಹರೀಶ್‌ ಪೂಂಜ ಅವರನ್ನು ತನಿಖೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಲಾಗಿತ್ತು 

ಹರೀಶ್ ಪೂಂಜಾ ವಿರುದ್ದದ ಪ್ರಕರಣ ಕುರಿತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದರು. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯವಿದೆ. ರಾಜಕೀಯ ಟೀಕೆ ಮಾಡಿದರೆ ಪ್ರಕರಣ ದಾಖಲಿಸುತ್ತೇವೆ ಎನ್ನುತ್ತಿದ್ದೀರಿ. ಹೀಗಾದರೆ ಪ್ರತಿ ನಿತ್ಯ ಪ್ರಕರಣ ದಾಖಲಿಸಬೇಕಾಗುತ್ತದೆ. ಹಳೇ ವಿಚಾರವಾಗಿ ಶಾಸಕ ಹರೀಶ್‌ ಪೂಂಜಾ ಮೇಲೆ ಕೇಸ್‌ ಹಾಕುವ ಮೂಲಕ ಆರಂಭದಲ್ಲೇ ನಾಯಕರು ದುರಹಂಕಾರ, ದ್ವೇಷ ಹಾಗೂ ದಮನಕಾರಿ ಆಡಳಿತವನ್ನು ತೋರಿಸಿದ್ದಾರೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಅವರಲ್ಲಿದೆ. ಆದರೆ ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ ಎಂದಿದ್ದರು.