ಮಂಗಳೂರು: ಮಣಿಪುರ ಹಿಂಸಾಚಾರ ಖಂಡಿಸಿ ಕ್ರೈಸ್ತರ ಪ್ರತಿಭಟನೆ

ಮಣಿಪುರ ಹಿಂಸಾಚಾರ ಖಂಡನೆ - ಮಂಗಳೂರಿನಲ್ಲಿ ಕ್ರೈಸ್ತರ ಪ್ರತಿಭಟನೆ

ಮಂಗಳೂರು: ಮಣಿಪುರದಲ್ಲಿ ಕಳೆದ 85 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ, ಅಮಾನವೀಯ ಘಟನೆಗಳು, ಮಾನವ ಹಕ್ಕುಗಳ ಉಲ್ಲಂಘನೆಯಂತಹ ಭಯಾನಕ ಕೃತ್ಯಗಳನ್ನು ಖಂಡಿಸಿ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಮಹಿಳಾ ಆಯೋಗ, ಕ್ರೈಸ್ತ ಏಕತೆಯ ಆಯೋಗ ಮತ್ತು ಮಂಗಳೂರು ಕ್ರಿಶ್ಚಿಯನ್‌ ಕೌನ್ಸಿಲ್‌ ನ ಸಹಭಾಗಿತ್ವದಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೊ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್‌, ಉಲೇಮಾ ಒಕ್ಕೂಟದ ರಾಜ್ಯ ಅಧ್ಯಕ್ಷ ಎಸ್‌.ಪಿ. ಮಹಮದ್‌ ಧಾರಿಮಿ, ಮುಖಂಡ ರೋಯ್‌ ಕ್ಯಾಸ್ತಲಿನೊ ಅವರು ಮಾತನಾಡಿದರು.

ಮಾನವೀಯತೆ ಉಳಿಯ ಬೇಕು. ಅದಕ್ಕಾಗಿ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೋಯ್‌ ಕ್ಯಾಸ್ತಲಿನೊ ಹೇಳಿದರು. ಕ್ಯಾಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ ಮಾತನಾಡಿ ಹಿಂಸಾಚಾರ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಿಲ್ಲಿ ಚಲೊ ಮತ್ತು ಬಳಿಕ ಅಗತ್ಯ ಬಿದ್ದರೆ ಮಣಿಪುರಕ್ಕೂ ಹೋಗುವವರಿದ್ದೇವೆ ಎಂದರು.