ಕಡಬ: ರಸ್ತೆಯಿಲ್ಲದೆ ರೋಗಿಯನ್ನು ಹೊತ್ತುಕೊಂಡು ಸಾಗಿದ ಜನ…!

ಮಹಿಳೆಯನ್ನು ಚೇರ್ ಮೇಲೆ ಕುಳ್ಳಿರಿಸಿ ಆಸ್ಪತ್ರೆಗೆ ಹೊತ್ತುಕೊಂಡು ಹೋದ ಜನ

ಕಡಬ : ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣ ರೋಗಿಯೊಬ್ಬರನ್ನು ಸಂಬಂಧಿಕರು ಚೇರ್ ಮೇಲೆ ಕುಳ್ಳಿರಿಸಿ ಆಸ್ಪತ್ರೆಗೆ ಹೊತ್ತುಕೊಂಡು ಹೋಗುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಇಚ್ಲಂಪ್ಪಾಡಿಯ ಕೆರ್ನಡ್ಕ ನಿವಾಸಿ ಸಾವಿತ್ರಿ ಗೋಪಾಲ್ ಅವರಿಗೆ ವಾರಕ್ಕೆ 2 ದಿನ ಪುತ್ತೂರು ಆಸ್ಪತ್ರೆಯಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಆದರೆ ಸಾವಿತ್ರಿ ಅವರ ಮನೆಗೆ ವಾಹನ ಸಂಚಾರಕ್ಕೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಹೊತ್ತೇ ಸಾಗಬೇಕಾದ ಸ್ಥಿತಿ ಇದೆ.

ಸಾವಿತ್ರಿ ಮನೆಗೆ ಹೋಗುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳ ಜಮೀನು ಇದ್ದು ಅವರು ರಸ್ತೆಗೆ ಜಾಗ ಬಿಟ್ಟು ಕೊಡದ ಹಿನ್ನಲೆಯಲ್ಲಿ ಕೇವಲ ನಡೆದುಕೊಂಡು‌ ಹೋಗುವಷ್ಟೇ ದಾರಿ ಮಾತ್ರ ಇದೆ. ಈಗಾಗಲೇ ಹಲವು ಬಾರಿ ಸಾವಿತ್ರಿ ಮನೆಗೆ ರಸ್ತೆಗಾಗಿ ದಾರಿ ಬಿಟ್ಟುಕೊಡುವಂತೆ ಮನವಿ ಮಾಡಲಾಗಿತ್ತು ಆದರೆ ಜಮೀನಿನ ಮಾಲೀಕರು ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಹಿನ್ನಲೆ ಜಾಗ ಬಿಟ್ಟು ಕೊಡದ ಹಿನ್ನಲೆಯಲ್ಲಿ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ, ಸದ್ಯ ರೋಗಿಯನ್ನು ಹೊತ್ತೊಯ್ಯುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.