ಸುಳ್ಯ: ಬೈಕ್‌ ಕಳವು - ಹರಕೆ ಹೇಳಲು ಹೊರಟಾಗಲೇ ಸಿಕ್ಕಿ ಬಿದ್ದ ಕಳ್ಳ.!

ಕಳವಾದ ಬಗ್ಗೆ ಕಲ್ಕುಡನಿಗೆ ಹರಕೆ ಹೇಳಲು ಹೋಗುತ್ತಿರುವಾಗಲೇ ಸಿಕ್ಕ ಬೈಕ್‌

ಸುಳ್ಯ: ಬೈಕ್‌ ಕಳವಾದ ಹಿನ್ನಲೆ ಕಳಕೊಂಡವರು ಹರಕೆ ಹೇಳಲು ಹೋಗುತ್ತಿದ್ದಾಗ ಆತನ ಕೈಗೆ ಕಳ್ಳ ಸಿಕ್ಕಿಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ.

ನಿಲ್ಲಿಸಿದ್ದ ಬೈಕನ್ನು ಕದ್ದು ಮರುದಿನ ಅದೇ ಬೈಕಿನಲ್ಲಿ ತೆರಳುತ್ತಿದ್ದ ಕಳ್ಳ ಹರಕೆ ಹೇಳಲು ಹೋಗುತ್ತಿದ್ದ ಬೈಕ್‌ ಮಾಲಿಕನ ಆತನ ಕೈಗೆ ಸಿಕ್ಕಿಬಿದ್ದಿದ್ಧಾನೆ. ಸಿಕ್ಕಿಬಿದ್ದ ಕಳ್ಳನನ್ನು ಮೈಸೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂದು ಗುರುತಿಸಲಾಗಿದೆ.

ಉಬರಡ್ಕದ ಕಾರ್ತಿಕ್‌ ಸುಳ್ಯಕೋಡಿ ಎಂಬವರು ಪುತ್ತೂರಿನಲ್ಲಿ ಕ್ಯಾಂಪ್ಕೋ ಉದ್ಯೋಗಿಯಾಗಿದ್ದು, ಜು.25ರಂದು ಸಂಜೆ ತನ್ನ ಬೈಕ್‌ನ್ನು ಸುಳ್ಯ ಸರಕಾರಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿ ರಾತ್ರಿ ಪಾಳಿಯ ಕೆಲಸಕ್ಕೆ ಬಸ್ ನಲ್ಲಿ ಪುತ್ತೂರಿಗೆ ತೆರಳಿದ್ದರು. ಮರುದಿನ ಬಂದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್‌ ಇರಲಿಲ್ಲ. ಪೊಲೀಸರಿಗೆ ವಿಷಯ ತಿಳಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕೆಂಪು ಜಾಕೆಟ್‌ ಮತ್ತು ಖಾಕಿ ಪ್ಯಾಂಟ್‌ ಧರಿಸಿದ ವ್ಯಕ್ತಿಯೊಬ್ಬ ನಕಲಿ ಕೀ ಬಳಸಿ ಬೈಕ್‌ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂದಿದೆ.

ಜು. 27ರಂದು ಬೆಳಗ್ಗೆ ಕಾರ್ತಿಕ್‌ ಅವರು ತನ್ನ ಕುಟುಂಬಸ್ಥರ ಜೊತೆ ಕಾರಿನಲ್ಲಿ ಸುಳ್ಯದ ಕಡೆ ಬಂದು ಬೈಕ್‌ ಕಳವಾದ ಬಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಹರಕೆ ಹೇಳಿಕೊಳ್ಳಲು ಹೋರಟಾಗ ಕೆಂಪು ಜಾಕೆಟ್‌, ಖಾಕಿ ಪ್ಯಾಂಟ್‌ ಧರಿಸಿದ್ದ ವ್ಯಕ್ತಿ ಬೈಕ್‌ನಲ್ಲಿ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಹೋಗುವುದು ಕಂಡುಬಂದಿದೆ. ಕೂಡಲೇ ಇದು ತನ್ನದೇ ಬೈಕ್ ಎಂಬುದನ್ನು ಗುರುತು ಹಿಡಿದ ಕಾರ್ತಿಕ್‌ ತನ್ನ ಸಹೋದರ ಮತ್ತು ಗೆಳೆಯರಿಗೆ ವಿಷಯ ತಿಳಿಸಿ ಅದರಂತೆ ಅರಂತೋಡಿನಲ್ಲಿ ಸ್ಥಳೀಯರು ಬೈಕನ್ನು ಅಡ್ಡಗಟ್ಟಿ ವಿಚಾರಿಸಲು ಮುಂದಾದಾಗ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಿದ್ದಾನೆ. ಈ ಬಗ್ಗೆ ಕಲ್ಲುಗುಂಡಿ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿ ಬೈಕ್‌ನಲ್ಲಿ ಹಿಂಬಾಲಿಸಿ ಕಲ್ಲುಗುಂಡಿ ಹೊರ ಠಾಣೆ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ತಕ್ಷಣ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡವಿರಿಸಿ ಬೈಕ್‌ ಕಳ್ಳನನ್ನು ಹಿಡಿದು ವಿಚಾರಿಸಿದ್ದಾರೆ.

ಆ ವೇಳೆ ಆತ ಮೈಸೂರಿನ ಮೆಡಿಕಲ್‌ ವಿದ್ಯಾರ್ಥಿ ನಿರಂಜನ್‌ ಎಂದು ತಿಳಿದುಬಂದಿದೆ. ಬೈಕ್‌ ಕದ್ದು ಕಾಸರಗೋಡಿನಲ್ಲಿದ್ದ ತನ್ನ ಅಜ್ಜಿಯ ಮನೆಗೆ ಹೋಗಿ ಅಲ್ಲಿಂದ ಮರುದಿನ ಮೈಸೂರಿಗೆ ಹೋಗಲೆಂದು ಹಿಂತಿರುಗುವ ವೇಳೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.