ಉಡುಪಿ ವಿವಾದ: ಘಟನೆ ಖಂಡಿಸಿ ದ.ಕ.ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ಮಂಗಳೂರು ಪುರಭವನದ ಬಳಿ ಬೃಹತ್‌ ಪ್ರತಿಭಟನೆ

ಮಂಗಳೂರು: ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಮಂಗಳೂರು ಪುರಭವನದ ಬಳಿ ಬೃಹತ್‌ ಪ್ರತಿಭಟನೆ ಹಾಗೂ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಧರಣಿ ನಡೆಯಿತು.

ಪ್ರಕರಣದ ತನಿಖೆ ನಡೆಸಲು ವಿಫಲತೆ ಕಂಡ ಉಡುಪಿ ಪೊಲೀಸ್ ಇಲಾಖೆ ಹಾಗೂ ಸೂಕ್ತ ತನಿಖೆ ನಡೆಸಲು ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ನೀತಿಗೆ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಮತ್ತೊಮ್ಮೆ ಜಿಹಾದಿಗಳು ತಲೆ ಎತ್ತಿದ್ದಾರೆ.

ಆಡಳಿತದಲ್ಲಿ ಕಾಂಗ್ರೆಸ್ ಸರಕಾರ ಇದೆಯೋ ಅಥವಾ ಜಿಹಾದಿ ಸರಕಾರ ಇದೆಯೋ ಎನ್ನುವ ಶಂಕೆ ಕಾಡಿದೆ. ಇಲ್ಲಿ ಆಡಳಿತ ನಡೆಸುವವರು ಯಾರು ಎನ್ನುವ ಶಂಕೆ ಮೂಡಿದೆ. ಭಯೋತ್ಪಾದನೆಯನ್ನು ಹುಟ್ಟುಹಾಕುವ ಕಾಂಗ್ರೆಸ್ ಸರಕಾರ ಪಿಎಫ್‌ಐ ಕಾರ್ಯಕರ್ಯರ ವಿರುದ್ಧ ಬಿಜೆಪಿ ಸರಕಾರ ಹಾಕಿದ್ದ ಕೇಸನ್ನು ಸಿದ್ಧರಾಮಯ್ಯ ಸರಕಾರ ತೆಗೆದು ಹಾಕುವ ಕೆಲಸ ಮಾಡುತ್ತಿದೆ. ಇದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಶಾಸಕರಾದ ವೇದವ್ಯಾಸ ಕಾಮತ್‌, ರಾಜೇಶ್ ನಾಯ್ಕ್‌, ಭಾಗೀರಥಿ ಮುರುಳ್ಯ, ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್‌, ಎಂಎಲ್‌ಸಿ ಪ್ರತಾಪ್‌ ಸಿಂಹ ನಾಯಕ್‌ ಮೊದಲಾದವರು ಭಾಗವಹಿಸಿದರು.