ಉಡುಪಿ: ರಾತ್ರೋರಾತ್ರಿ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಆರೆಸ್ಟ್.!!

ಉದ್ಯಮಿಗೆ ಬಹುಕೋಟಿ ವಂಚನೆ ಆರೋಪ - ಚೈತ್ರಾ ಕುಂದಾಪುರ ಸಹಿತ ನಾಲ್ವರು ಪೊಲೀಸರ ವಶಕ್ಕೆ

ಉಡುಪಿ: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತು ಅವರ ಜತೆಗಾರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಜೊತೆಗೆ ಗಗನ್ ಕಡೂರು, ಶ್ರೀಕಾಂತ್ ನಾಯಕ್,  ಪ್ರಸಾದ್ ಎಂವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೆಂಗಳೂರು ನಗರದ ಬಂಡೇಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಅವರನ್ನು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಂದ 7 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬ ಆರೋಪವಿದೆ.