ಮಂಗಳೂರು: ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಚಂದ್ರ ಕೆ.ಅಡೂರು ನಿಧನ.!

ಅಲ್ಪ ಕಾಲದ ಅಸೌಖ್ಯ - ಹೆಡ್‌ ಕಾನ್ಸ್‌ಟೇಬಲ್ ವಿಧಿವಶ

ಮಂಗಳೂರು: ಅಪರಾಧ ಪ್ರಕರಣಗಳ ಬೆನ್ನು ಬಿದ್ದು ಅಪರಾಧಿಗಳನ್ನು ಬಂಧಿಸುವಲ್ಲಿ ನಿಷ್ಣಾತನಾಗಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಚಂದ್ರ ಕೆ. ಅಡೂರು(49) ಶನಿವಾರ ನಿಧನ ಹೊಂದಿದ್ದಾರೆ.

ಅಲ್ಪ ಕಾಲದ ಅಸೌಖ್ಯದ ಬಳಿಕ ಮಂಗಳೂರು ಖಾಸಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದ್ರ ಅವರು ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಕರ್ತವ್ಯದಲ್ಲಿದ್ದ ಅವರು ಬಳಿಕ ಏಕಾಏಕಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು ಆದ್ರೆ ಶನಿವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಚಂದ್ರ ಅಡೂರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದು ಅಂತ್ಯ ಕ್ರೀಯೆ ಹುಟ್ಟೂರು ಕಾಸರಗೋಡಿನ ಅಡೂರುನಲ್ಲಿ ನಡೆಯಲಿದೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಆಗುವ ಮುಂಚೆ ಡಿಸಿಐಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಚಂದ್ರ ಅವರು ಅಪರಾಧ ಜಗತ್ತಿನ ಬಗ್ಗೆ ಅತೀ ಹೆಚ್ಚು ಜ್ಞಾನ ಉಳ್ಳವರಾಗಿದ್ದರು. ಮೂಲದ ಕೇರಳದ ಕಾಸರಗೋಡು ಜಿಲ್ಲೆಯ ಅಡೂರಿನವರಾದ ಚಂದ್ರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಾಲೇಜು ಶಿಕ್ಷಣ ಮುಗಿಸಿ 1996ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಸೇರಿದ್ದರು. ಮಂಗಳೂರಿನ ಪಣಂಬೂರು, ಪಾಂಡೇಶ್ವರ, ಉಳ್ಳಾಲ, ಡಿಸಿಐಬಿ ಠಾಣೆಗಳಲ್ಲಿ ಹಾಗೂ 2014ರಲ್ಲಿ ಹೆಡ್‌ಕಾನ್ಸ್‌ಟೆಬಲ್ ಆಗಿ ಭಡ್ತಿ ಹೊಂದಿದ ಬಳಿಕ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ, ಸಿಸಿಬಿಯಲ್ಲಿ ಸೇವೆ ಸಲ್ಲಿಸಿದ್ದರು.

ಎರಡು ವರ್ಷಗಳ ಹಿಂದೆ ಸಿಸಿಬಿಯಿಂದ ಅವರನ್ನು ಸಿಸಿಆರ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಭೂಗತ ಪಾತಕಿಗಳು ಮತ್ತು ರೌಡಿಗಳು ಸೇರಿದಂತೆ ವಿವಿಧ ಆರೋಪಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ತಿಳುವಳಿಕೆಯನ್ನು ಹೊಂದಿರುವ ಚಂದ್ರ ಕೆ. ಅವರ ಸಹಾಯದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಅನೇಕ ಮಂದಿ ಕ್ರಿಮಿನಲ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಅವರು ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಭಾಜನರಾಗಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ ಕೂಡ ಪಡೆದಿದ್ದರು. ತಮ್ಮ ಸೇವಾವಧಿಯಲ್ಲಿ 33,000 ರೂ.ಗಳಿಗಿಂತಲೂ ಅಧಿಕ ನಗದು ಬಹುಮಾನ, 10 ಪ್ರಶಂಸಾ ಪತ್ರ ಹಾಗೂ 40 ಉತ್ತಮ ಸೇವಾ ಪುರಸ್ಕಾರಗಳನ್ನು ಗಳಿಸಿದ್ದರು. ಚಂದ್ರ ಕೆ ಅಡೂರು ಅವರ ನಿಧನಕ್ಕೆ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು, ಅವರ ಸಹೊದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.