ಮಂಗಳೂರು: ದಂಪತಿಯ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ಡ್ರಾ ಮಾಡಿ ವಂಚನೆ

ಮಂಗಳೂರು: ದಂಪತಿಯ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ಡ್ರಾ ಮಾಡಿ ವಂಚನೆ

ಮಂಗಳೂರು: ಜಾಗವನ್ನು ನೋಂದಣಿ ಸಂದರ್ಭ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿದನ್ನೇ ದುರುಪಯೋಗ ಪಡಿಸಿಕೊಂಡು ಖಾತೆಯಿಂದ ಸಾವಿರಾರು ರೂ ಹಣ ಎಗರಿಸಿದ ಆರೋಪ ಕೇಳಿಬಂದಿದೆ. 

ಮಂಗಳೂರು ಹೊರವಲಯದ ಶಕ್ತಿನಗರ ಪದವು ಕಲ್ಪನೆ ನಿವಾಸಿಗಳಾದ ಲೋಕೇಶ್ ಮತ್ತು ಅವರ ಪತ್ನಿ ಬಬಿತಾ ಎಂಬವರ ಪ್ರತ್ಯೇಕ ಬ್ಯಾಂಕ್ ಖಾತೆಯಿಂದ ತಲಾ 10 ಸಾವಿರ ರೂ.ವನ್ನು ಆನ್‌ಲೈನ್ ಮೂಲಕ ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ. ಲೋಕೇಶ್ ಅವರ ಕೆನರಾ ಬ್ಯಾಂಕ್ ಖಾತೆಯಿಂದ ಮತ್ತು ಬಬಿತಾ ಅವರ ಎಸ್‌ಬಿಐ ಖಾತೆಯಿಂದ ಆನ್‌ಲೈನ್ ಮೂಲಕ ಹಣವನ್ನು ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 ಮಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ಆ.30ರಂದು ಲೋಕೇಶ್ ಮತ್ತು ಬಬಿತಾ ಅವರು ತಾವು ಖರೀದಿಸಿದ ಜಾಗವನ್ನು ಜಂಟಿಯಾಗಿ ನೋಂದಣಿ ಮಾಡಿಸಿಕೊಂಡಿದ್ದು, ಆ ನಂತರ ಇಬ್ಬರ ಎರಡು ಪ್ರತ್ಯೇಕ ಬ್ಯಾಂಕ್ ಖಾತೆಯಿಂದ ಸೆ.13ರಂದು ಹಣ ಡ್ರಾ ಆಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿತ್ತು ಎನ್ನಲಾಗಿದೆ. 

ನೋಂದಣಿ ಸಂದರ್ಭ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಲಾಗಿತ್ತು. ಅದನ್ನು ದುರುಪಯೋಗಪಡಿಸಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿರುವ ಬಗ್ಗೆ ದೂರುದಾರರು ಶಂಕೆ ವ್ಯಕ್ತಪಡಿಸಿದ್ದಾರೆ.