ಏಷ್ಯನ್ ಗೇಮ್ಸ್‌ 2023: ಪುರುಷರ 50 ಮೀ ಶೂಟಿಂಗ್‌ನಲ್ಲಿ 'ಚಿನ್ನ'ಕ್ಕೆ ಮುತ್ತಿಟ್ಟ ಭಾರತೀಯ ತಂಡ

ಏಷ್ಯನ್ ಗೇಮ್ಸ್‌ 2023: ಪುರುಷರ 50 ಮೀ ಶೂಟಿಂಗ್‌ನಲ್ಲಿ 'ಚಿನ್ನ'ಕ್ಕೆ ಮುತ್ತಿಟ್ಟ ಭಾರತೀಯ ತಂಡ

 

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023 ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಪುರುಷರ 50 ಮೀ ರೈಫಲ್ ತಂಡದ ಸ್ಪರ್ಧೆಯಲ್ಲಿ ಭಾರತೀಯ ತಂಡವು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಶುಕ್ರವಾರ, ಸೆಪ್ಟೆಂಬರ್ 29ರಂದು ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆಯೋರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು. 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಇದು 15ನೇ ಪದಕ ಮತ್ತು 7ನೇ ಚಿನ್ನವಾಗಿದೆ.

ಭಾರತವು 1769 ಅಂಕಗಳ ಗಮನಾರ್ಹ ಸ್ಕೋರ್ ಗಳಿಸಿತು, ಕಳೆದ ವರ್ಷ ಪೆರುವಿನಲ್ಲಿ ಯುಎಸ್ಎನ ಹಿಂದಿನ ದಾಖಲೆಯನ್ನು ಎಂಟು ಅಂಕಗಳಿಂದ ಮೀರಿಸಿದೆ.

ಚೀನಾ 1763 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡರೆ, ರಿಪಬ್ಲಿಕ್ ಆಫ್ ಕೊರಿಯಾ 1748 ಅಂಕಗಳೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿತು.

ಅರ್ಹತಾ ಹಂತದಲ್ಲಿ, ಸ್ವಪ್ನಿಲ್ ಕುಸಾಲೆ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಇಬ್ಬರೂ 591 ಸ್ಕೋರ್‌ಗಳೊಂದಿಗೆ ಹೊಸ ಏಷ್ಯನ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು.