ಮಂಗಳೂರು: ಸಮುದ್ರದಲ್ಲಿ ಸಿಲುಕಿಕೊಂಡ ಮೀನುಗಾರರ ರಕ್ಷಿಸಿದ ಕೋಸ್ಟ್ ಗಾರ್ಡ್

ಮಂಗಳೂರು ಕೋಸ್ಟ್ ಗಾರ್ಡ್ ಕಾರ್ಯಾಚರಣೆ – ಮೀನುಗಾರಿಕಾ ದೋಣಿಯಿಂದ 10 ಮಂದಿ ಮೀನುಗಾರರ ರಕ್ಷಣೆ

ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿ ಸಿಲುಕಿಕೊಂಡಿದ್ದ ಮೀನುಗಾರಿಕಾ ದೋಣಿಯಿಂದ  10 ಮಂದಿ ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ರಕ್ಷಿಸಿದೆ.

ಮಂಗಳೂರು ಮೀನುಗಾರಿಕಾ ಧಕ್ಕೆಯಿಂದ 39 ನಾಟಿಕಲ್ ಮೈಲ್ ದೂರದ ಸಮುದ್ರದ ಮಧ್ಯೆ ಸೆ.24ರಿಂದ ಇಂಜಿನ್‌ನ ತಾಂತ್ರಿಕ ವೈಫಲ್ಯದಿಂದ  ತೊಂದರೆಗೆ ಮೀನುಗಾರಿಕಾ ಬೋಟ್ ಸಿಲುಕಿಕೊಂಡಿತ್ತು. 2 ದಿನಗಳಿಂದ ಪ್ರತಿಕೂಲ ಹವಮಾನದ ಮಧ್ಯೆ 10 ಮಂದಿ ಮೀನುಗಾರರು ಸಮುದ್ರ ಮಧ್ಯೆ ಏನೂ ಮಾಡಲಾಗದೆ ಸಿಕ್ಕಿಹಾಕಿಕೊಂಡಿದ್ದರು.

ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿದ್ದ ಬಗ್ಗೆ ಬೋಟ್‌ನಿಂದ ರಕ್ಷಣೆಗಾಗಿ ಮುಂಬೈನ ತಟ ರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು. ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ತಕ್ಷಣ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು.

ಅದರಂತೆ ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲಕರ ಸಹಕಾರದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಕೋಸ್ಟ್‌ ಗಾರ್ಡ್‌ನ ಎರಡು ಇಂಟರ್‌ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ಮತ್ತು ಮೀನುಗಾರರನ್ನು ರಕ್ಷಣೆ ಮಾಡಿದೆ. ಕೆಟ್ಟು ಹೋದ ಮೀನುಗಾರಿಕಾ ದೋಣಿಯನ್ನು ನವಮಂಗಳೂರು ಬಂದರು ತೀರಕ್ಕೆ ಎಳೆದು ತಂದಿದೆ.