ಮಂಗಳೂರು: "ಕಾನೂನು ಕೈಗೆತ್ತಿಕೊಂಡರೆ ಮುಲಾಜಿಲ್ಲದೆ ಗಡಿಪಾರು" ಎಂದ ಎಸ್‌ಪಿ ರಿಷ್ಯಂತ್‌

ನೈತಿಕ ಪೊಲೀಸ್‌ಗಿರಿ ಮತ್ತು ಡ್ರಗ್ಸ್ ವಿರುದ್ಧ ಜಿಲ್ಲೆಯಲ್ಲಿ ವಿಶೇಷ ನಿಗಾ

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮತ್ತು ಡ್ರಗ್ಸ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕ. ಇವೆರಡೂ ವಿಚಾರಗಳ ಬಗ್ಗೆ ವಿಶೇಷ ನಿಗಾ ಇಡಲಾಗಿದೆ. ಸಂಘಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಡ್ರಗ್ಸ್ ಮಟ್ಟ ಹಾಕಲು ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಸಿ.ಬಿ. ರಿಷ್ಯಂತ್ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅನ್ಯಕೋಮಿನ ಯುವಕ-ಯುವತಿಯರಿಗೆ ಸಂಬ0ಧಿಸಿದ ವಿಷಯಗಳಲ್ಲಿ ಕಾನೂನು ಕೈಗೆತ್ತಿಕೊಳ್ಳುವ, ನೈತಿಕ ಪೊಲೀಸ್‌ಗಿರಿ ಎಂದು ಕರೆಯಲ್ಪಡುವ ಘಟನೆಗಳು ಮತ್ತು ಡ್ರಗ್ಸ್  ಇವೆರಡು ದ.ಕ. ಜಿಲ್ಲೆಯಲ್ಲಿ ಸದ್ಯಕ್ಕಿರುವ ಪ್ರಮುಖ ಸವಾಲುಗಳು ಎಂದಿದ್ದಾರೆ.

ನೈತಿಕ ಪೊಲೀಸ್‌ಗಿರಿ, ಮತೀಯ ಗಲಭೆಗೆ ಕಾರಣರಾಗುವವರ ವಿರುದ್ಧ ಕಠಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಜೈಲಿಗಟ್ಟುವುದು ಮಾತ್ರವಲ್ಲದೆ ಜಾಮೀನಿನಲ್ಲಿ ಬಿಡುಗಡೆಯಾದರೂ ಅವರ ಮೇಲೆ ನಿಗಾ ಇಡಲಾಗುತ್ತದೆ. ಜಾಮೀನು ಷರತ್ತು ಉಲ್ಲಂಘನೆ, ಕೃತ್ಯ ಪುನರಾವರ್ತನೆ ಮೊದಲಾದ ಸಂದರ್ಭಗಳಲ್ಲಿ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡುವುದು, ಬಾಂಡ್ ಪಡೆಯುವುದು, ರೌಡಿಶೀಟ್ ತೆರೆಯುವುದು ಇತ್ಯಾದಿ ಮಾಡುತ್ತೇವೆ ಎಂದು ಎಸ್‌ಪಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.