ಈಜಲು ತೆರಳಿದ್ದ ಬಾಲಕ ಮೃತ್ಯು; ಒಬ್ಬನೇ ಪುತ್ರನನ್ನು ಕಳೆದುಕೊಂಡ ತಾಯಿ..!

ಈಜಲು ತೆರಳಿದ್ದ ಬಾಲಕ ಮೃತ್ಯು
ಒಬ್ಬನೇ ಪುತ್ರನನ್ನು ಕಳೆದುಕೊಂಡ ತಾಯಿ..!

ಕಾಪು: ಈಜಲು ತೆರಳಿದ ಬಾಲಕನೊಬ್ಬ ಮುಳುಗಿ ಸಾವಿಗೀಡಾದ ದುರ್ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ.

ಬೆಳಪು ವಸತಿ ಬಡಾವಣೆ ಕಸ್ತೂರಿ ಅವರ ಪುತ್ರ ವಿಶ್ವಾಸ್ ನಾಯಕ್ (11) ಮೃತ ದುರ್ದೈವಿ. ಈತ ಇನ್ನಂಜೆ ಎಸ್‌ಎಸ್ ಆಂಗ್ಲಮಾಧ್ಯಮ ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿಯಾಗಿದ್ದು, ಗುರುವಾರ ಶಾಲೆಯಿಂದ ಬಂದವನು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರಳಿದ್ದ.

ಈಜುತ್ತಿದ್ದ ವಿಶ್ವಾಸ್ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡು ಮಕ್ಕಳು ಮೇಲೆ ಬಂದು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಕೆರೆಯಿಂದ ವಿಶ್ವಾಸ್‌ನನ್ನು ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ವಿಶ್ವಾಸ್ ನಾಯಕ್ ಮೃತಪಟ್ಟಿದ್ದಾನೆ.

ಒಬ್ಬನೇ ಮಗನೊಂದಿಗೆ ಒಂಟಿ ಜೀವನ ನಡೆಸುತ್ತಿದ್ದ ತಾಯಿ ಕಷ್ಟಪಟ್ಟು ಮುದ್ದಿನಿಂದ ಸಾಕುತ್ತಿದ್ದು, ಮಗ ಮತ್ತು ಮಗನ ವಿದ್ಯಾಭ್ಯಾಸದ ಖರ್ಚಿಗಾಗಿ ಮೆಡಿಕಲ್ ಒಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ಕೃತಕ ಕೆರೆ ಅಪಾಯಕಾರಿಯಾಗಿದ್ದು, ಮುಚ್ಚುವಂತೆ ಸ್ಥಳೀಯರು ಹಲವು ಬಾರಿ ಕೆಐಎಡಿಬಿ ಸಹಿತ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷಿಸಿದ ಪರಿಣಾಮ ಬಾಲಕನ ಬಲಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.