ಮಂಗಳೂರಿನಿಂದ ಹೊರಟಿದ್ದ ತೈಲನೌಕೆಯ ಮೇಲೆ ಕ್ಷಿಪಣಿ ದಾಳಿ.!

ಭಾರತದ ತೈಲನೌಕೆಯ ಮೇಲೆ ಕ್ಷಿಪಣಿ ದಾಳಿ

ಕೆಂಪು ಸಮುದ್ರವನ್ನು ಸಂಪರ್ಕಿಸುವ ಬಾಬ್ ಎಲ್-ಮಾಂಡೆಬ್ ಜಲಸಂಧಿಯಲ್ಲಿ ಭಾರತದಿಂದ ಪ್ರಯಾಣ ಬೆಳೆಸಿದ್ದ ತೈಲನೌಕೆಯನ್ನು ಗುರಿಯಾಗಿಸಿ ಎರಡು ಕ್ಷಿಪಣಿ ದಾಳಿ ನಡೆದಿದ್ದು ಕೂದಲೆಳೆಯಷ್ಟು ಅಂತರದಲ್ಲಿ ಗುರಿತಪ್ಪಿದೆ ಎಂದು ಬುಧವಾರ ವರದಿ ಮಾಡಿದೆ.

ಮಂಗಳೂರಿನಿಂದ ಹೊರಟಿದ್ದ ತೈಲನೌಕೆಯಲ್ಲಿ ಸಶಸ್ತ್ರ ಭದ್ರತಾ ಸಿಬಂದಿಗಳಿದ್ದರು ಎಂದು ಹಡಗಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಯಾವುದೇ ನಾಶ-ನಷ್ಟ ಆಗಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ವಿಫಲ ದಾಳಿ ನಡೆದ ಸಂದರ್ಭದಲ್ಲಿ ಸಮೀಪದಲ್ಲಿ ಇದ್ದ ಅಮೆರಿಕದ ಸಮರ ನೌಕೆ ಶಂಕಿತ ಹೌದಿ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದೂ ವರದಿ ಹೇಳಿದೆ.

 ಮಾರ್ಷಲ್ ದ್ವೀಪದೇಶದ ಧ್ವಜ ಹೊಂದಿರುವ `ಅಡ್ಮೋರ್ ಎನ್‍ಕೌಂಟರ್' ಹಡಗು ಮಂಗಳೂರು ಬಂದರಿನಿಂದ ವಿಮಾನ ಇಂಧನವನ್ನು ನೆದರಲ್ಯಾಂಡ್‍ಗೆ ಸಾಗಿಸುತ್ತಿತ್ತು ಎಂದು ವರದಿಯಾಗಿದೆ. ದಾಳಿ ನಡೆದಿರುವುದನ್ನು ಬ್ರಿಟನ್ ರಕ್ಷಣಾ ಪಡೆಯೂ ದೃಢಪಡಿಸಿದೆ. ಕೆಂಪು ಸಮುದ್ರದ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿ ದಾಳಿ ತೀವ್ರಗೊಳಿಸುವುದಾಗಿ ಹೌದಿ ಸಂಘಟನೆ ಎಚ್ಚರಿಕೆ ನೀಡಿತ್ತು.