ಮಂಗಳೂರು: ಖೋಟಾ ನೋಟು ಚಲಾವಣೆಗೆ ಯತ್ನ ಆರೋಪಿ ಬಂಧನ

ಖೋಟಾ ನೋಟು ಚಲಾವಣೆಗೆ ಯತ್ನ ಆರೋಪಿ ಬಂಧನ

ಮಂಗಳೂರು ನಗರದ ಕಂಕನಾಡಿ ಬಳಿ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಜೇಶ್ವರದ ಆಬುಪಡ್ಪು ನಿವಾಸಿ ಪ್ರಶ್ವಿತ್ (25) ಎಂದು ಗುರುತಿಸಲಾಗಿದೆ.ಆರೋಪಿಯು 500 ರೂ., 200 ರೂ., 100 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂ. ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ 500 ರೂ. ಮುಖಬೆಲೆಯ 3 ನೋಟುಗಳು, 200 ರೂ. ಮುಖಬೆಲೆಯ 2 ನೋಟುಗಳು, 100 ರೂ. ಮುಖ ಬೆಲೆಯ 3 ನೋಟುಗಳು ಹಾಗೂ 10 ಸಾವಿರ ರೂ. ಅಂದಾಜು ಮೌಲ್ಯದ ಮೊಬೈಲ್ ಫೋನ್ ಹಾಗೂ 4250 ರೂ ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.