ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಸಿಟಿ ಬಸ್ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಮಹೇಶ್ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ ಶೆಟ್ಟಿ (39) ಮೃತರು. ನಿನ್ನೆಯಿಂದ ನಾಪತ್ತೆಯಾಗಿದ್ದರು. 

ಇಂದು ನಸುಕಿನ ಜಾವ ಸೋಮೇಶ್ವರ ಸಮುದ್ರದಲ್ಲಿ ದೇಹ ತೇಲುತ್ತಿದ್ದು ಸ್ಥಳೀಯ ಮೀನುಗಾರರು ಸ್ಥಳಕ್ಕೆ ಎಳೆದು ತಂದಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕನ್ನು ಇಟ್ಟು, ರುದ್ರಪಾದೆಯಲ್ಲಿ ಟವಲೊಂದರಲ್ಲಿ ಬೈಕ್ ಕೀ, ಪರ್ಸ್ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪಸ್9ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ.

ಅವಿವಾಹಿತರಾಗಿರುವ ಜಗದೀಶ್ ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಇವರ ತಂದೆ ಕೂಡ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಹೇಶ್ ಟ್ರಾವೆಲ್ಸ್ ಬಸ್ಸು ಮಾಲಕ ಪ್ರಕಾಶ್ ಶೇಖ ಕೂಡ ಕೆಲ ತಿಂಗಳ ಹಿಂದಷ್ಟೆ (ಅಕ್ಟೋಬರ್ 1ರಂದು) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಮಹೇಶ್ ಟ್ರಾವೆಲ್ಸಲ್ಲೇ ಕ್ಲೀನರ್, ನಿರ್ವಾಹಕ ವೃತ್ತಿ ಮಾಡಿ ಕಳೆದ ಹಲವು ವರುಷಗಳಿಂದ ಚಾಲಕರಾಗಿದ್ದ ಜಗದೀಶ್ ಆತ್ಮಹತ್ಯೆಗೈದಿರುವುದು ಅವರ ಮನೆ ಮಂದಿ, ಸ್ನೇಹಿತರನ್ನ ಆಘಾತಗೊಳಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.