ರೆಸಾರ್ಟ್‌ ಹೇಳಿಕೆ: ರಾಜಕಾರಣಿ ಎವಿ ರಾಜುಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ನಟಿ ತ್ರಿಷಾ

ರೆಸಾರ್ಟ್‌ ಹೇಳಿಕೆ: ರಾಜಕಾರಣಿ ಎವಿ ರಾಜುಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ನಟಿ ತ್ರಿಷಾ

ತನ್ನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಐಎಡಿಎಂಕೆ ಮಾಜಿ ನಾಯಕ ಎವಿ ರಾಜು ವಿರುದ್ಧ ನಟಿ ತ್ರಿಷಾ ಕೃಷ್ಣನ್‌ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಐಎಡಿಎಂಕೆ ಮಾಜಿ ಸದಸ್ಯ ಟೀಕಿಸುವ ಭರದಲ್ಲಿ ತ್ರಿಷಾ ಅವರ ಹೆಸರನ್ನು ಎಳೆದು ತಂದಿದ್ದರು.

ತ್ರಿಷಾ ಅವರನ್ನು ಶಾಸಕರ ಕೋರಿಕೆಯ ಮೇರೆಗೆ ರೆಸಾರ್ಟ್‌ ಗೆ ಕರೆಸಿಕೊಳ್ಳಲಾಗಿತ್ತು. ಇದಕ್ಕಾಗಿ ತ್ರಿಷಾ ಅವರಿಗೆ 25 ಲಕ್ಷ ಕೊಟ್ಟು ರೆಸಾರ್ಟ್‌ ಗೆ ಕರೆದುಕೊಂಡು ಬರಲಾಗಿತ್ತು ಎನ್ನುವ‌ ಹೇಳಿಕೆಯನ್ನು ನೀಡಿ ಭಾರೀ ವಿವಾದಕ್ಕೆ ಒಳಗಾಗಿದ್ದರು. ಪ್ರಚಾರಗಿಟ್ಟಿಸಿಕೊಳ್ಳಲು ಹಾಗೂ ಎಲ್ಲರ ಗಮನ ಸೆಳೆಯಲು ಜನ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದನ್ನು ಪದೇ ಪದೇ ನೋಡುವುದು ಅಸಹ್ಯಕರವಾಗಿದೆ. ಇವರ ಹೇಳಿಕೆ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು. ನನ್ನ ಲೀಗಲ್‌ ಟೀಮ್‌ ಇದನ್ನು ನೋಡಿಕೊಳ್ಳುತ್ತದೆ ಎಂದು ತ್ರಿಷಾ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಈ ಹೇಳಿಕೆಗೆ ಬೆನ್ನಲ್ಲೇ ನಟಿ ತ್ರಿಷಾ ಬೆಂಬಲವಾಗಿ ನಟ ವಿಶಾಲ್‌ ಸೇರಿದಂತೆ ಹಲವರು ಧ್ವನಿ ಎತ್ತಿದ್ದರು. ಇದಾದ ಬಳಿಕ ಎವಿ ರಾಜು ಕ್ಷಮೆಯಾಚಿಸಿದ್ದರು. ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತ್ರಿಷಾರಂತೆ ಬೇರೆಯವರು ಎಂದು ನಾನು ಹೇಳಿದ್ದೆ. ತ್ರಿಷಾ ಎಂದೇ ಉಲ್ಲೇಖ ಮಾಡಿ ಹೇಳಿಲ್ಲ. ಯಾರಿಗಾದರೂ ನೋವಾಗಿದ್ದಾರೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಕ್ಷಮೆಯಾಚಿಸಿದ ಬಳಿಕವೂ ನಟಿ ತ್ರಿಷಾ ಅವರು ಮಾನಹಾನಿ ಹೇಳಿಕೆ ನೀಡಿದ ಎವಿ ರಾಜು ರಾಜು ವಿರುದ್ದ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಮಾನನಷ್ಟ ನೋಟಿಸ್ ಕಳುಹಿಸಿ 24 ಗಂಟೆಯೊಳಗೆ ಭೇಷರತ್‌ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.

ನೋಟಿಸ್‌ ನಲ್ಲಿ ಏನಿದೆ?:

ಮಾನಹಾನಿ ಹೇಳಿಕೆ ನೀಡಿದ್ದಕ್ಕಾಗಿ ನಟಿಗೆ ಪರಿಹಾರ ನೀಡಬೇಕು.( ಎಷ್ಟು ಮೊತ್ತ ಎನ್ನುವುದನ್ನು ಬ್ಲರ್‌ ಮಾಡಲಾಗಿದೆ) ಇನ್ನು ಮುಂದೆ ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು.ನೋಟಿಸ್ ಸ್ವೀಕರಿಸಿದ 24 ಗಂಟೆಗಳ ನಂತರ ಆಕೆಗೆ ಬೇಷರತ್ ಕ್ಷಮೆಯಾಚಿಸುವ ಹೊರತಾಗಿ, ವಿವಿಧ ಪ್ರಕಟಣೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಎಲ್ಲಾ ಲೇಖನಗಳನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹೇಳಿದ್ದನ್ನು ಮಾಡಲು ಸಾಧ್ಯವಾಗದಿದ್ದರೆ, ರಾಜು ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕ್ರಮ ಜರುಗಿಸುವುದಾಗಿಯೂ ನೋಟಿಸ್ ನಲ್ಲಿ ಹೇಳಲಾಗಿದೆ. ಬುಧವಾರವೇ ನೋಟಿಸ್‌ ಕಳುಹಿಸಲಾಗಿದೆ. ರಾಜು ಅವರು ಇದಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.