ಮಂಗಳೂರು: ರಿಕ್ಷಾ ಚಾಲಕ ನೇಣುಬಿಗಿದು ಆತ್ಮಹತ್ಯೆ.!

ಅವಿವಾಹಿತ ನೇಣಿಗೆ ಶರಣು

ಮಂಗಳೂರು : ಮನೆ ನವೀಕರಣ ಕಾಮಗಾರಿ ಕೈಗೊಂಡಿದ್ದ ರಿಕ್ಷಾ ಚಾಲಕ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಕುಂಪಲ ಸಮೀಪದ ಲಕ್ಷ್ಮಿ ಗುಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ಆತ್ಮಹತ್ಯೆಗೈದವರು ಮೂಲತ: ಕುಂಪಲ ಆಶ್ರಯ ಕಾಲನಿ ನಿವಾಸಿ ಧನರಾಜ್ ಪೂಜಾರಿ(32).

ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬವು ಮನೆ ನವೀಕರಣ ಹಿನ್ನೆಲೆಯಲ್ಲಿ ಸಮೀಪದ ಲಕ್ಷ್ಮೀಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವಿವಾಹಿತನಾಗಿರುವ ಧನರಾಜ್ ದೇರಳಕಟ್ಟೆಯ ಯೆನೆಪೋಯ ರಿಕ್ಷಾ ಪಾರ್ಕಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದರು. ನಿನ್ನೆ ಸಂಜೆ ಧನರಾಜ್ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ರಿಕ್ಷಾ ಚಾಲಕರಾಗಿದ್ದ ಮೃತ ಧನರಾಜ್ ತಂದೆ ಲಿಂಗಪ್ಪ ಪೂಜಾರಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಧನರಾಜ್ ಮನನೊಂದು ಆತ್ಮ ಹತ್ಯೆಗೈದಿರುವ ಶಂಕೆ ಇದೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಧನರಾಜ್ ತಂದೆ,ತಾಯಿ,ಸಹೋದರನನ್ನು ಅಗಲಿದ್ದಾನೆ. ಎರಡು ವರುಷಗಳ ಹಿಂದೆ ನಡೆದ ರೂಪದರ್ಶಿ ಪ್ರೇಕ್ಷ ಆತ್ಮಹತ್ಯೆ ನಂತರ ಕುಂಪಲ ಪ್ರದೇಶದಲ್ಲಿ ಸಾಲು,ಸಾಲಾಗಿ ಹದಿ ಹರೆಯದ ಯುವಕ,ಯುವತಿಯರು ಆತ್ಮ ಹತ್ಯೆಗೈದು ಅಕಾಲಿಕ ಮರಣವನ್ನಪ್ಪುತ್ತಿದ್ದು ಕುಂಪಲ ಪ್ರದೇಶವು ಸುಸೈಡ್ ಸ್ಪಾಟ್ ಆಗಿ ಮಾರ್ಪಟ್ಟಿದೆ ಅನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯಗಳಿಂದ ಕೇಳಿಬಂದಿದೆ.