CAA ಉಲ್ಲೇಖವಿರೋ ಅಮಿತ್ ಶಾ, ರಾಜನಾಥ್ ಸಿಂಗ್ ಕಾರಿನ ನಂಬರ್ ಪ್ಲೇಟ್ ವೈರಲ್

ಅಮಿತ್ ಶಾ ಅವರ ಕಾರಿನ ನಂಬರ್ ‘DL1CAA4421’
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಉಲ್ಲೆಖವಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಾರಿನ ನಂಬರ್‌ ಪ್ಲೇಟ್‌ಗಳು ಇದೀಗ ಭಾರೀ ಸದ್ದು ಮಾಡುತ್ತಿವೆ.

ಮೋದಿ ಸರ್ಕಾರದ ಮುಂದಿನ ದೊಡ್ಡ ನಡೆ ಸಿಎಎ ಜಾರಿಯಾಗಲಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಅಮಿತ್ ಶಾ ಅವರ ಕಾರು ‘DL1CAA4421’ ನಂಬರ್ ಪ್ಲೇಟ್‌ನೊಂದಿಗೆ ಕಾಣಿಸಿಕೊಂಡ ನಂತರ ಊಹಾಪೋಹಗಳು ಇನ್ನೂ ಹೆಚ್ಚಿವೆ.

ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿಯ ಚುನಾವಣಾ ಸಮಿತಿ ಸಭೆಗೆ ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕಾರಿನ ನಂಬರ್‌ ಪ್ಲೇಟ್‌ಗಳು ಎಲ್ಲರ ಗಮನಸೆಳೆದವು. ಈ ಇಬ್ಬರು ನಾಯಕರ ಕಾರಿನ ನಂಬರ್‌ ಪ್ಲೇಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿವೆ. ನಂಬರ್ ಪ್ಲೇಟ್‌ನಲ್ಲಿ ‘ಸಿಎಎ’ ಇರುವುದರಿಂದ ಶೀಘ್ರದಲ್ಲೇ ಕಾನೂನನ್ನು ಜಾರಿಗೆ ತರುವುದಾಗಿ ಸರ್ಕಾರ ಸುಳಿವು ನೀಡಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.

ಕೆಲವು ದಿನಗಳ ಹಿಂದೆ ಅಮಿತ್ ಶಾ ಅವರು ಲೋಕಸಭಾ ಚುನಾವಣೆಗೆ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಲಿದೆ. 2019ರಲ್ಲಿ ಜಾರಿಗೆ ಬಂದಿರುವ ಈ ಕಾನೂನನ್ನು ಚುನಾವಣೆಗೂ ಮುನ್ನ ಕೆಲ ನಿಯಮಗಳನ್ನು ಹೊರಡಿಸಿದ ನಂತರ ಜಾರಿಗೆ ತರಲಾಗುವುದು ಎಂದು ಹೇಳಿದ್ದರು.

ಸಿಎಎ ವಿರುದ್ಧ ಹೇಳಿಕೆಗಳನ್ನು ನೀಡಿ ನಮ್ಮ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ನೀಡಲು ಸಿಎಎಯನ್ನು ಉದ್ದೇಶಿಸಲಾಗಿದೆ. ಇದು ಯಾರೊಬ್ಬರ ಭಾರತೀಯ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದರು.