ಮಂಗಳೂರು: ಗೋಲ್ಡ್ ಸ್ಮಗ್ಲಿಂಗ್ - ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ

ಗುದದಲ್ಲಿ ಬಚ್ಚಿಟ್ಟು 45 ಲಕ್ಷ ಮೌಲ್ಯದ ಚಿನ್ನ ಸಾಗಾಟ

ಮಂಗಳೂರು : ಗುದದಲ್ಲಿ ಬಚ್ಚಿಟ್ಟು 45 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನವನ್ನು ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿದ ವಿಮಾನ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಬುಧಾಬಿಯಿಂದ ಏರ್ ಇಂಡಿಯಾ ಎಕ್ಸ್​​ಪ್ರೆಸ್ ವಿಮಾನದಲ್ಲಿ ಆಗಮಿಸಿದ ಕಾಸರಗೋಡು ಮೂಲದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು. ಸಂಶಯದ ಮೇಲೆ ಪ್ರಯಾಣಿಕನ್ನು ಪರಿಶೀಲನೆ ನಡೆಸಿದ ವೇಳೆ ಆರೋಪಿ ಸಿಕ್ಕಬಿದ್ದಿದ್ದಾನೆ.

ಮಾರ್ಚ್ 3ರಂದು ಕಾಸರಗೋಡು ಮೂಲದ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದರು. ಇದೇ ವೇಳೆ, ಆತ ಮೂರು ಮೊಟ್ಟೆಯ ಆಕಾರದ ಲಕೋಟೆಗಳಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡು, ನಂತರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಟ್ಟು 729 ಗ್ರಾಂ ತೂಕದ 45,92,700 ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.