ಸುಳ್ಯ : ಶಿಲಾಯುಗದ ಅಪರೂಪದ ಕೆತ್ತನೆಯುಳ್ಳ ಗುಹೆ ಪತ್ತೆ - ಹಿಂದಿನ ಕಾಲದ ಅಡಗು ತಾಣವಾಗಿರುವ ಶಂಕೆ

ಕಾಮಗಾರಿ ವೇಳೆ ಸುರಂಗ ಮಾದರಿ ಪತ್ತೆ
ಹಿಂದಿನ ಕಾಲದ ಅಡಗು ತಾಣವಾಗಿರುವ ಶಂಕೆ

ಸುಳ್ಯ : ಜೆಸಿಬಿ ಮೂಲಕ ಅಗೆತ ವೇಳೆ ಸುರಂಗ ಮಾದರಿ ಗುಹೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಕಾಣ ಸಿಕ್ಕಿದ್ದು ಕುತೂಹಲ ಸೃಷ್ಟಿಸಿದ್ದು ಗ್ರಾಮಸ್ಥರು ತಂಡೋಪ ತಂಡವಾಗಿ ಬಂದು ವೀಕ್ಷಣೆ ಮಾಡುತ್ತಿದ್ದಾರೆ.

ಕಲ್ಮಕಾರು ಗ್ರಾಮದ ಬಿಳಿಮಲೆ ಉಮೇಶ್ ಎಂಬವರಿಗೆ ಸೇರಿದ ಜಮೀನಿನ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಈ ಗುಹೆ ಮಾದರಿ ಪತ್ತೆಯಾಗಿದೆ. ಉಮೇಶ್ ಅವರು ತಮ್ಮ ರಬ್ಬರ್ ತೋಟದಲ್ಲಿ ಅಗೆತ ಮಾಡಿ ಅರಣ್ಯ ಕೃಷಿ ಉದ್ದೇಶದಿಂದ ಜೆಸಿಬಿ ಕೆಲಸ ಆರಂಭಿಸಿದ್ದರು. ಜಮೀನಿನಲ್ಲಿ ಪೊದೆ, ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದ ವೇಳೆ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಫೀಟ್ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ.

ಹಿಂದಿನ ಶಿಲಾಯುಗದಲ್ಲಿ ಆದಿ ಮಾನವರು ಕಾಡು ಪ್ರಾಣಿಗಳಿಂದ  ರಕ್ಷಿಸಲು ಇಂತಹ ಸುರಂಗ ಮಾದರಿ ಗುಹೆ ಇದಾಗಿರಲೂ ಬಹುದೆಂದು ಅಭಿಪ್ರಾಯಪಡಲಾಗಿದೆ. ಅಥವಾ ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ನಿರ್ಮಿಸಲಾದ ತಾಣವಾಗಿರಲೂಬಹುದು ಎಂದು ಶಂಕಿಸಲಾಗಿದೆ. ಮಾಹಿ ತಿ ತಿಳಿದ ಜನ, ಗ್ರಾಮಸ್ಥರು ತಂಡೋಪ ತಂಡವಾಗಿ ಬಂದು ವೀಕ್ಷಣೆ ಮಾಡುತ್ತಿದ್ದಾರೆ. ಇತಿಹಾಸ ತಜ್ಞರು, ಸಂಶೋಧಕರು ಹೆಚ್ಚಿನ ಅಧ್ಯಾಯನ ನಡೆಸಿದ್ರೆ ಇದರ ಮಾಹಿತಿ ಸಿಗಬಹುದು ಎನ್ನುತ್ತಾರೆ ಸ್ಥಳೀಯರು.