ಕಾಪು: ಹಣ ದೋಚಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್.!

1.25 ಲಕ್ಷ ದೋಚಿದ್ದ ಆರೋಪಿ ಬಂಧನ

ಕಾಪು: ಲೈನ್‌ ಸೇಲ್‌ ಮಾಡಿ ಹಣ ಸಂಗ್ರಹಿಸಿಕೊಂಡು ವಾಹನದತ್ತ ತೆರಳುತ್ತಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ಹೆದ್ದಾರಿ 66ರ ಕಾಪು ಅಂಡರ್‌ ಪಾಸ್‌ ಬಳಿ ದರೋಡೆ ಮಾಡಿದ ಪ್ರಕರಣದ ಆರೋಪದಲ್ಲಿ ಕಾಪು ಪೊಲಿಪು ನಿವಾಸಿ ಸಂತೋಷ ಕುಮಾರ್‌ (28)ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ವೃತ್ತ ನಿರೀಕ್ಷಕರ ನೇತೃತ್ವದ ತಂಡವು ಆರೋಪಿಯಿಂದ 1,00,200 ರೂ., ಒಂದು ಮೊಬೈಲ್‌ ಫೋನ್‌ ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ಉಡುಪಿ ಸಂತೆಕಟ್ಟೆ ನಿವಾಸಿ ಉಮೇಶ ಪ್ರಭು ಅವರು ಮಾ. 2ರಂದು ಲೈನ್‌ಸೇಲ್‌ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ ಹಣದ ಜತೆಗೆ ಕಾಪು ಅಂಡರ್‌ಪಾಸ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮಾರಿಗುಡಿ ಎದುರಿನ ಸರ್ವಿಸ್‌ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬಂದ ಬೈಕ್‌ ಸವಾರ 1.25 ಲಕ್ಷ ರೂ. ದೋಚಿ ಪರಾರಿಯಾಗಿದ್ದ.

ಉಡುಪಿ ಎಸ್ಪಿ ಡಾ| ಅರುಣ್‌ ಕೆ., ಎಎಸ್‌ಪಿ ಅಧೀಕ್ಷಕರಾದ ಎಸ್‌.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗ್ಡೆ, ಕಾರ್ಕಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್‌. ಮಾನೆ, ಕ್ರೈಂ ಎಸ್ಸೆ ಪುರುಷೋತ್ತಮ, ಕಾಪು ವೃತ್ತ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್‌, ನಾರಾಯಣ ಕಾಪು, ರಾಜೇಶ್‌ ಪಡುಬಿದ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.