ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ, ಮತ್ತೆ ಆತಂಕ.!!

ಶಾಲೆ ಬಳಿ ಸ್ಫೋಟಕ ವಸ್ತು ಪತ್ತೆ - ಮತ್ತೆ ಹೆಚ್ಚಿದ ಆತಂಕ

ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆ  ಬಾಂಬ್ ಸ್ಫೋಟ ಪ್ರಕರಣ  ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಮಾರ್ಚ್‌ 1ರಂದು ನಡೆದ ಈ ಘಟನೆಯ ರೂವಾರಿಯನ್ನು ಪತ್ತೆ ಹಚ್ಚಲು ಪೊಲೀಸರು ಇನ್ನೂ ಸಫಲರಾಗಿಲ್ಲ. ಅದರ ನಡುವೆಯೇ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿ ಆತಂಕ ಮೂಡಿಸಿವೆ.

ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಬೃಹತ್‌ ಪ್ರಮಾಣದ ಜಿಲೆಟಿನ್ ಕಡ್ಡಿ, ಡಿಟೋನೇಟರ್​​ ಹಾಗೂ ಇತರ ಕೆಲವು ಸ್ಫೋಟಕಗಳು ಸಿಕ್ಕಿವೆ. ಈ ಸ್ಫೋಟಕಗಳನ್ನು ಟ್ರ್ಯಾಕ್ಟರ್‌ ಒಂದರಲ್ಲಿ ಇಟ್ಟಿರುವುದು ಪತ್ತೆಯಾಗಿದೆ. ಬೆಳ್ಳಂದೂರು ಬಳಿಯ ಚಿಕ್ಕನಾಯಕನಹಳ್ಳಿ ದಿಣ್ಣೆಯ ಜಾಗದ ಮೇಲೆ ದಾಳಿ ಮಾಡಿದಾಗ ಈ ಸ್ಫೋಟಕಗಳು ಪತ್ತೆಯಾಗಿವೆ. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಇಟ್ಟಿರುವ ಮಾಹಿತಿ ಇದೆಯಾದರೂ ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಟ್ಟಿರುವುದು ಸ್ಪಷ್ಟವಾಗಿದೆ.

ಸ್ಫೋಟಕ ವಸ್ತುಗಳನ್ನು ಹೀಗೆ ಸಾರ್ವಜನಿಕ ಜಾಗದಲ್ಲಿ ಇಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಬಂಡೆ ಒಡೆಯಲು ಇಟ್ಟಿದ್ದ ಸ್ಪೋಟಕ ವಸ್ತುಗಳು ಇವೆಂದು ಹೇಳಲಾಗಿದ್ದರೂ ಲೆಸೆನ್ಸ್ ಇಲ್ಲದೇ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ. ಜಿಲೆಟಿನ್ ಕಡ್ಡಿಗಳು ಮತ್ತು ಹಾಗೂ ಬ್ಲಾಸ್ಟ್ ಮಾಡಲು ಇಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಾಲೆಗಳಿಗೆ ಬೆದರಿಕೆ - ಹೆಚ್ಚು ಆತಂಕ

ಕೆಲವು ವಾರಗಳ ಹಿಂದೆ ಎರಡು ಬಾರಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಶಾಲೆಯ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಎಲ್ಲಾ ಶಾಲೆಗಳಿಗೆ ಈ ಮೇಲ್‌ ಮೂಲಕ ಪತ್ರ ಬರೆಯಲಾಗಿತ್ತು. ಇದರಿಂದ ಭಾರಿ ಆತಂಕ ಸೃಷ್ಟಿಯಾಗಿತ್ತು. ಶಾಲೆಗಳ ಆವರಣದಲ್ಲಿ ಸಂಪೂರ್ಣ ಹುಡುಕಾಟ ನಡೆಸಿದ ಬಳಿಕವಷ್ಟೇ ಇದೊಂದು ಸುಳ್ಳು ಬೆದರಿಕೆ ಕರೆ ಎಂದು ಗೊತ್ತಾಗಿತ್ತು. ಇದೀಗ ಶಾಲೆಯ ಆವರಣದಲ್ಲೇ ಸ್ಫೋಟಕ ಸಿಕ್ಕಿದಾಗ ಸಹಜವಾಗಿ ಆತಂಕ ಜೋರಾಗಿದೆ.

ಇತ್ತ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ವ್ಯಕ್ತಿಯೊಬ್ಬ ಇಟ್ಟು ಹೋದ ಬಾಂಬ್‌ ಸ್ಫೋಟಗೊಂಡು ಹತ್ತು ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದ್ದರೂ ಆರೋಪಿ ಸಿಕ್ಕಿಲ್ಲ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡಲಾಗಿದೆ. ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನೇ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ಹುಡುಕಾಡಿದರೂ ಆರೋಪಿ ಸಿಗದೆ ಇರುವುದು ಚರ್ಚೆಗೆ ಕಾರಣವಾಗಿದೆ.