ಪುತ್ತೂರು: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಲೆಟ್ ಮಾಡಿ ತಿಂದ ಕಿಡಿಗೇಡಿಗಳು

ನೆಲ್ಲಿಕಟ್ಟೆಯ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಆಮ್ಮೆಟ್ ಮಾಡಿ ತಿಂದ ಕಿಡಿಗೇಡಿಗಳು

ಪುತ್ತೂರು: ರಾತ್ರೋರಾತ್ರಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಕ್ಕಳಿಗೆ ನೀಡಲು ಎಂದು ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೆಟ್ ಮಾಡಿ ತಿಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಲಿಕಟ್ಟೆಯ ಸಮೀಪ ನಡೆದಿದೆ. ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸೊತ್ತುಗಳನ್ನು ಕಿಡಿಗೇಡಿಗಳು ನಾಶ ಮಾಡಿ, ಗಲೀಜು ಮಾಡಿದ್ದ ವಾರದ ನಂತರ ಈ ಪ್ರಕರಣ ನಡೆದಿದೆ.

ಎಂದಿನಂತೆ ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ಬಂದಾಗ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿರುವುದನ್ನು ಗಮನಿಸಿದ್ದಾರೆ. ಅಂಗನವಾಡಿ ಪುಟಾಣಿಗಳಿಗೆಂದು ಅಡುಗೆ ಕೋಣೆಯಲ್ಲಿ ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಅಷ್ಟೇ ಅಲ್ಲದೆ, ಪಕ್ಕದಲ್ಲಿರುವ ಗ್ಯಾಸ್ ಸ್ಟವ್​ ಮೇಲೆ ಬಾಣಲೆ ಇಡಲಾಗಿದ್ದು, ಅದರಲ್ಲಿ ಆಮ್ಮೆಟ್ ತುಂಡು ಪತ್ತೆಯಾಗಿದೆ. ಅದರಂತೆ ಕಿಡಿಗೇಡಿಗಳು ಅಂಗನವಾಡಿಗೆ ನುಗ್ಗಿ ಆಮ್ಲೆಟ್ ಮಾಡಿ ತಿಂದಿರುವುದು ದೃಢಪಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

ವಾರದ ಹಿಂದೆಯಷ್ಟೆ ಕಿಡಿಗೇಡಿಗಳು ಪಕ್ಕದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸೊತ್ತುಗಳನ್ನು ನಾಶ ಮಾಡಿ ಗಲೀಜು ಮಾಡಿದ್ದರು. ಇದೀಗ ಕಿಡಿಗೇಡಿಗಳು ಅಂಗನವಾಡಿ ಕೇಂದ್ರಕ್ಕೂ ನುಗ್ಗಿದ್ದಾರೆ. ಇದು ಸಹಜವಾಗಿ ಸ್ಥಳೀಯ ನಿವಾಸಿಗರಲ್ಲಿ ಆತಂಕವನ್ನು ಮೂಡಿಸಿದೆ.