ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಕೊಲೆಯತ್ನ ಪ್ರಕರಣದಲ್ಲಿ ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ.

ಉಳ್ಳಾಲ: ಮಂಗಳೂರು ಹರೇಕಳದಲ್ಲಿ ಕಳೆದ ಏಳು ವರ್ಷಗಳ ಹಿಂದೆ ನಡೆದ ಅಂಗಡಿಯೊಂದರ ಮಾಲೀಕನ ಕೊಲೆಯತ್ನ ಹಾಗೂ ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಳ್ಳಾಲ ಉಳಿಯ ಮರಿಯಕ್ಲಬ್ ನಿವಾಸಿ ರಾಜೇಶ್ ಸುವರ್ಣ (24) ಎಂಬಾತನನ್ನು ಎಸಿಪಿ ಧನ್ಯಾ ನಾಯಕ್ ನೇತೃತ್ವದ ಮಾದಕದ್ರವ್ಯ ವಿರೋಧಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹರೇಕಳ ಕಡವಿನ ಬಳಿ ಬಳಿಯಿರುವ ಎನ್ .ಎಫ್ ಜನರಲ್ ಸ್ಟೋರ್ ಮಾಲೀಕ ಅಬ್ದುಲ್ ರಹಿಮಾನ್ ಎಂಬವರ ಮೇಲೆ 2017ರ ಮೇ.24 ರಂದು ರಿಕ್ಷಾದಲ್ಲಿ ಬಂದಿದ್ದ ಅಶ್ರಫ್ ಮತ್ತು ಮೂವರು ಸೇರಿಕೊಂಡು ರಾತ್ರಿ 10ಕ್ಕೆ ಅಂಗಡಿಯೊಳಕ್ಕೆ ನುಗ್ಗಿ ತಲವಾರು ತೋರಿಸಿ ` ರಂಡ್ರೆ ಮೋನೆ ನೀನ್ ಪೊಲೀಸ್ ಗೆ ಮಾಹಿತಿ ಕೊಡ್ಕುಡೆ’ ಎಂದು ಅವಾಚ್ಯವಾಗಿ ಬೈದು, ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಕ್ಯಾಷಿನಲ್ಲಿದ್ದ ರೂ.50,000 ವ್ಯಾಪಾರದ ಹಣವನ್ನು ದರೋಡೆ ನಡೆಸಿದ್ದರು. 

ಈ ಸಂಭಂದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿ ಅಶ್ರಫ್ ಸೇರಿದಂತೆ ರಾಜೇಶ್ ಹಾಗೂ ಇನ್ನೋರ್ವನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಶ್ರಫ್ ಹಾಗೂ ಇನ್ನೋರ್ವನನ್ನು ಪೊಲೀಸರು ಅಂದೇ ಬಂಧಿಸಿದ್ದು, ಇದೀಗ ಏಳು ವರ್ಷಗಳ ನಂತರ ಪ್ರಕರಣ ಸಂಬಂಧ ರಾಜೇಶನ ಬಂಧನವಾಗಿದೆ. ಆರೋಪಿಗಳ ವಿರುದ್ಧ 120(ಬಿ), 448,307,394,504 ಜೊತೆಗೆ 34 ಐಪಿಸಿ ಮತ್ತು 25(ಬಿ) ಆರ್ಮ್ಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.