ಪ್ರವೀಣ್‌ ನೆಟ್ಟಾರು ಕೊಲೆ ಕೇಸ್ : ಆರೋಪಿ ಜಬೀರ್‌ಗೆ ಜಾಮೀನು ನಿರಾಕರಣೆ.!!

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ
ಮೊಹಮ್ಮದ್ ಜಬೀರ್‌ಗೆ ಜಾಮೀನು ನಿರಾಕರಣೆ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್‌ ಜಬೀರ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಪುತ್ತೂರು ನಿವಾಸಿಯಾದ ಮೊಹಮ್ಮದ್‌ ಜಬೀರ್‌ ಅವರು ತಮ್ಮ ಕಸ್ಟಡಿ ವಿಸ್ತರಣೆ ಮಾಡಿ ಡಿಫಾಲ್ಟ್‌ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ಕೋರ್ಟ್ 2023ರ ಫೆ. 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ಜಬೀರ್‌ ಅವರು 21ನೇ ಆರೋಪಿಯಾಗಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 302, ಶಸ್ತ್ರಾಸ್ತ್ರ ಕಾಯಿದೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 16, 18, 19 ಮತ್ತು 20ರ ಅಡಿ ಪ್ರಕರಣ ದಾಖಲಿಸಲಾಗಿದೆ. 2022ರ ನವೆಂಬರ್’ನಲ್ಲಿ ಜಬೀರ್‌ ಬಂಧನವಾಗಿದ್ದು, ನವೆಂಬರ್ ೮ ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. 

2023ರನವರಿ ೨೦ ರಂದು, 20 ಆರೋಪಿಗಳ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿ, ಹೆಚ್ಚುವರಿ ತನಿಖೆಗೆ ಮನವಿ ಮಾಡಿತ್ತು. ಆದರೆ, ಜಬೀರ್‌ ಅವರ ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ಜಬೀರ್‌ ಅವರ 90 ದಿನಗಳ ಬಂಧನ ಅವಧಿ ಮುಗಿದಿದ್ದರೂ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ೨೦೨೩ರ ಪೆಬ್ರವರಿಯಲ್ಲಿ ಪ್ರಕರಣದ ವಿಚಾರಣೆಯ ದಿನ ಜಬೀರ್‌ ಅವರು ಜಾಮೀನು ಕೋರಿರಲಿಲ್ಲ. ಎನ್‌ಐಎ ಕಸ್ಟಡಿ ವಿಸ್ತರಣೆಯನ್ನೂ ಕೋರಿರಲಿಲ್ಲ. 08.02.2023ರಂದು ಎನ್‌ಐಎ ಕಸ್ಟಡಿ ವಿಸ್ತರಣೆ ಕೋರಿದ್ದು, ಅದೇ ದಿನ ಅರ್ಜಿದಾರರು ಡೀಫಾಲ್ಟ್‌ ಜಾಮೀನು ಕೋರಿದ್ದರು. ಇದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಆ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.