ಮಂಗಳೂರು: ಮತ್ತೆ 10 ರೌಡಿ ಶೀಟರ್‌ಗಳಿಗೆ ಗಡಿಪಾರು ಆದೇಶ.!!

ಲೋಕಸಭಾ ಚುನಾವಣೆ ಹಿನ್ನಲೆ
ರೌಡಿ ಶೀಟರ್‌ಗಳಿಗೆ ಗಡಿಪಾರು ಆದೇಶ

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಉದ್ದೇಶಕ್ಕಾಗಿ ಚುನಾವಣಾ ಆಯೋಗದ ನಿರ್ದೇಶನದ ಆಧಾರದ ಮೇಲೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 10 ಮಂದಿ ರೌಡಿಶೀಟರ್‌ಗಳ ವಿರುದ್ಧ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಬುಧವಾರ ಗಡಿಪಾರು ಆದೇಶ ನೀಡಿದ್ದಾರೆ. 

ಮಂಗಳೂರು ಕಸಬಾ ಬೆಂಗ್ರೆಯ ಸುಹೇಲ್ (21), ಕಣ್ಣೂರು ಜಾನಕಿತೋಟ ಕಂಪೌಂಡ್‌ನ ನಿಕ್ಷಿತ್ ಪೂಜಾರಿ ಯಾನೆ ನಿಶಿತ್ (21), ಉಳ್ಳಾಲ ಸೋಮೇಶ್ವರದ ಸುನೀಲ್ (24), ಕುದ್ರೋಳಿಯ ಲತೀಶ್ ನಾಯಕ್ ಯಾನೆ ಲತೀಶ್ ಯಾನೆ ಲತ್ಸ (34), ಉಳ್ಳಾಲ ಬಸ್ತಿಪಡ್ಪುವಿನ ಯತೀಶ್ (46), ಮುಲ್ಕಿ ಕಾರ್ನಾಡುವಿನ ಧಮಲಿಂಗ ಯಾನೆ ಧರ್ಮ (34), ಕಣ್ಣೂರು ದಯಾಂಬು ಹನೀಝ್ (32), ಮುಲ್ಕಿ ಚಿತ್ರಾಪುರದ ತೇಜ್‌ಪಾಲ್ ಆರ್ ಕುಕ್ಯಾನ್(40), ವಾಮಂಜೂರು ಉಳಾಯಿಬೆಟ್ಟುವಿನ ಅನ್ಸಾರ್ (31), ಪಾಂಡೇಶ್ವರ ಶಿವನಗರದ ಅಭಿಷೇಕ್ ಯಾನೆ ಅಭಿ (29) ಎಂಬವರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ಇದಕ್ಕೂ ಮೊದಲು 26 ಮಂದಿ ವಿರುದ್ಧ ಗಡಿಪಾರು ಆದೇಶ ನೀಡಲಾಗಿತ್ತು. ಅವರನ್ನು ವಿವಿಧ ಜಿಲ್ಲೆಗಳಿಗೆ ರವಾನಿಸಲಾಗಿದೆ ಮತ್ತು ಶಾಂತಿಯುತವಾಗಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.