ಗ್ಯಾಂಗ್‌ ಸ್ಟರ್ ಪ್ರಸಾದ್ ಪೂಜಾರಿ ಅರೆಸ್ಟ್.!!

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿ ಚೀನಾದಲ್ಲಿ ಬಂಧನ

ಮುಂಬೈ ಮೂಲದ ನಟೋರಿಯಸ್ ಗ್ಯಾಂಗ್ ಸ್ಟರ್, ಚೀನಾದಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ್ ಪೂಜಾರಿಯನ್ನು ಮುಂಬೈ ಪೊಲೀಸರು ಚೀನಾದಿಂದ ವಶಕ್ಕೆ ಪಡೆದು ಮುಂಬೈಗೆ ಕರೆತಂದಿದ್ದಾರೆ.

20 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ್ ಪೂಜಾರಿ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಕುಮಾರ್ ಪಿಳ್ಳೆ ಸಹಚರನಾಗಿ ಭೂಗತ ಚಟುವಟಿಕೆಯಲ್ಲಿ ತೊಡಗಿದ್ದ. ಮುಂಬೈನಲ್ಲಿ ಕೊಲೆ, ಹಫ್ತಾ ವಸೂಲಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಚೀನಾದ ಯುವತಿಯನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿದ್ದ ಪ್ರಸಾದ್ ಪೂಜಾರಿ ಛೋಟಾ ರಾಜನ್ ಬಂಧನದ ಬಳಿಕ ತನ್ನದೇ ನೆಟ್ವರ್ಕ್ ಬೆಳೆಸಿಕೊಂಡು ಮುಂಬೈನಲ್ಲಿ ಉದ್ಯಮಿಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಈತನ ಬಂಧನಕ್ಕಾಗಿ ಮುಂಬೈ ಪೊಲೀಸರು ಇಂಟರ್ ಪೋಲ್ ನಲ್ಲಿ ರೆಡ್ ಕಾರ್ನರ್ ನೋಟೀಸ್ ಹೊರಡಿಸಿದ್ದರು.

ಇತ್ತೀಚೆಗೆ ಚೀನಾದಿಂದ ಪತ್ನಿಯ ಜೊತೆಗೆ ಹಾಂಕಾಂಗ್ ತೆರಳಿದ್ದಾಗ ಇಂಟ‌ರ್ ಪೋಲ್ ನೋಟಿಸ್‌ ಆಧಾರದಲ್ಲಿ ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅದರ ಬೆನ್ನಲ್ಲೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದು, ಚೀನಾದಿಂದ ಗಡೀಪಾರು ಮಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ಯಶಸ್ವಿಯಾಗಿ ಮುಂಬೈ ಪೊಲೀಸರು ಚೀನಾಕ್ಕೆ ತೆರಳಿ ಪ್ರಸಾದ್ ಪೂಜಾರಿಯನ್ನು ವಶಕ್ಕೆ ಪಡೆದು ಮುಂಬೈಗೆ ಕರೆತಂದಿದ್ದಾರೆ.

ಚೀನಾದಲ್ಲಿ ತಲೆಮರೆಸಿಕೊಂಡರೆ ಸುಲಭದಲ್ಲಿ ಭಾರತಕ್ಕೆ ಕರೆತರುವುದು ಸಾಧ್ಯವಾಗಲ್ಲ. ಕ್ರಿಮಿನಲ್ ಆಗಿದ್ದರೂ ಅಲ್ಲಿನ ಅಧಿಕಾರಿಗಳು ಭಾರತಕ್ಕೆ ಬಿಟ್ಟು ಕೊಡಲು ಒಪ್ಪುವುದಿಲ್ಲ. ಅಲ್ಲದೆ, ಪ್ರಸಾದ್ ಪೂಜಾರಿ ಅಲ್ಲಿನದ್ದೇ ಯುವತಿಯನ್ನು ಮದುವೆಯಾಗಿದ್ದರಿಂದ ಬಿಟ್ಟು ಕೊಟ್ಟಿರಲಿಲ್ಲ. 2020ರಲ್ಲಿ ಆತನ ವಿಸಿಟಿಂಗ್ ವೀಸಾ ಅವಧಿ ಕೊನೆಗೊಂಡಿದ್ದರಿಂದ ವಶಕ್ಕೆ ಪಡೆಯಲು ಪ್ರಯತ್ನ ನಡೆಸಿದ್ದೆವು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 2019ರಲ್ಲಿ ಶಿವಸೇನೆ ಮುಖಂಡ ಚಂದ್ರಕಾಂತ್ ಜಾಧವ್ ಅವರ ಮೇಲೆ ಫೈರಿಂಗ್ ಮಾಡಿದ ಘಟನೆ ನಡೆದಿತ್ತು. ಪ್ರಸಾದ್ ಪೂಜಾರಿಯೇ ಮಾಡಿಸಿದ್ದಾನೆ ಎಂಬ ಮಾಹಿತಿ ಆಧರಿಸಿ ಮತ್ತು ಆರೋಪಿಗಳಿಗೆ ಪ್ರಸಾದ್ ತಾಯಿ ಇಂದಿರಾ ವಿಠಲ್ ಪೂಜಾರಿ ಸಹಕರಿಸಿದ್ದರೆಂದು ಮುಂಬೈ ಪೊಲೀಸರು 60 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಮುಂಬೈ ಮಿಡ್ ಡೇ ಮಾಹಿತಿ ಪ್ರಕಾರ, 2008ರಲ್ಲಿ ಪ್ರಸಾದ್‌ ಪೂಜಾರಿ ವಿಸಿಟಿಂಗ್ ವೀಸಾದಲ್ಲಿ ಚೀನಾಕ್ಕೆ ತೆರಳಿ ನೆಲೆಸಿದ್ದ. ಅದು ಆತನಿಗೆ ಸಿಕ್ಕಿದ್ದ ವೀಸಾ 2012ರಲ್ಲಿಯೇ ಕೊನೆಯಾಗಿತ್ತು ಎಂಬ ಮಾಹಿತಿ ಕಲೆಹಾಕಿದ್ದರು. ಚೀನಾದ ಗ್ವಾಂಗ್ ಡಾಂಗ್ ಪ್ರಾಂತ್ಯದ ಶೆನ್ಸೆನ್ ನಗರದ ಲೌಹು ಎಂಬಲ್ಲಿ ತಾತ್ಕಾಲಿಕ ವಸತಿಯಲ್ಲಿ ನೆಲೆಸಿದ್ದ. ಪ್ರಸಾದ್ ಪೂಜಾರಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವನು ಎನ್ನಲಾಗುತ್ತಿದೆ.