ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಂಚನೆ - ರಾಜಸ್ಥಾನ ಮೂಲದ ಯುವಕ ಅರೆಸ್ಟ್

ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ಲಕ್ಷಾಂತರ ರುಪಾಯಿ ವಂಚಿಸಿದವ ಅರೆಸ್ಟ್

ಮಂಗಳೂರು: ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ ವಾಟ್ಸ್ಆ್ಯಪ್ ನಲ್ಲಿ ಲಿಂಕ್ ಕಳುಹಿಸಿ ಹಣ ಪಡೆದು ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ್ ಜಿಲ್ಲೆಯ ಬಾವುರಿಯ ಸದ್ದಾಂ ಗೌರಿ ಬಾವುರಿ (30) ಬಂಧಿತ ಆರೋಪಿ.

ಆರೋಪಿಯು ದೂರುದಾರಿಗೆ ವಾಟ್ಸ್ಆ್ಯಪ್ ನಲ್ಲಿ ಸಂದೇಶವನ್ನು ಕಳುಹಿಸಿದ್ದು, ಪಾರ್ಟ್ ಟೈಂ ಜಾಬ್ ನ ಲಿಂಕ್ ಕಳುಹಿಸಿ ಲಿಂಕ್ ಮುಖಾಂತರ ಹಣ ತೊಡಗಿಸಲು ತಿಳಿಸಿದ್ದಾನೆ. ಜೊತೆಗೆ ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಗಳಿಸಬಹುದು ಎಂದು ದೂರುದಾರರನ್ನು ನಂಬಿಸಿದ್ದಾನೆ. ಆರೋಪಿ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿರುವುದಾಗಿ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಯನ್ನು ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್ ಗಳು, 4 ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.