ಕೊಯಮತ್ತೂರು ಅಗ್ನಿ ಪರೀಕ್ಷೆಗಿಳಿದ ಅಣ್ಣಾಮಲೈ; ಲೋಕಸಮರದ ಯುದ್ಧಕ್ಕೆ ಕೇಸರಿ ರಣಕಹಳೆ

ಕಾರ್ಯಕರ್ತರು, ಮುಖಂಡರ ಜೊತೆ ಆಗಮಿಸಿ ನಾಮಪತ್ರ ಸಲ್ಲಿಕೆ
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕೆ ಅಣ್ಣಾಮಲೈ

ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಮೊದಲ ಹಂತದ ಮತದಾನ ಏ.​ 19ರಂದು ನಡೆಯಲಿದ್ದು ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಲೋಕಸಭಾ ಎಲೆಕ್ಷನ್​ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಅಣ್ಣಾಮಲೈಯವರು ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಇಂದು ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಕೊಯಮತ್ತೂರು ಜಿಲ್ಲಾ ಕಚೇರಿಗೆ ತೆರಳಿ ಡಿಸಿ ಕ್ರಾಂತಿ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಣ್ಣಾಮಲೈ ಜೊತೆ ಕೊಯಮತ್ತೂರು ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಇದ್ದರು.

ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ 2020ರಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ಗುರುತಿಸಿದ್ದ ಬಿಜೆಪಿ ತಮಿಳುನಾಡಿನ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು. ಈ ಹಿಂದೆ ವಿಧಾನಸಭೆ ಎಲೆಕ್ಷನ್​ಗೆ ಸ್ಪರ್ಧೆ ಮಾಡಿ ಸೋತು ಹೋಗಿದ್ದರು. ಆದರೆ ಪಕ್ಷ ಇದೀಗ ಅವರ ಮೇಲೆ ನಂಬಿಕೆ ಇಟ್ಟು ಲೋಕಸಭೆ ಚುನಾವಣೆಯ ಟಿಕೆಟ್​ ನೀಡಿದ್ದು ಹೆಚ್ಚಿನ ಅಂತರದಿಂದ ಗೆಲುವು ಪಡೆಯುವುದು ಅವರ ಉದ್ದೇಶವಾಗಿದೆ.

ಈ ಮೂಲಕ ಅಣ್ಣಾಮಲೈ ಮೂಲಕ ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿ ಬಿಗ್ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕೆ ಅಣ್ಣಾಮಲೈ ವಿರುದ್ಧ ಸ್ಪರ್ಧಿಸಲು ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಗಣಪತಿ ರಾಜಕುಮಾರ್ ಅವರು ಕೂಡ ನಾಮಿನೇಷನ್ ಸಲ್ಲಿಸಿದ್ದಾರೆ.