"ಮತದಾನಕ್ಕೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್" ; ಶಾಸಕ ಹರೀಶ್‌ ಪೂಂಜ

ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತಕ್ಕ ಉತ್ತರ ಕೊಟ್ಟ ಹರೀಶ್ ಪೂಂಜಾ

ಮಂಗಳೂರು : 'ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ' ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ಹತಾಶೆಯ ಭಾವನೆಯಿಂದ ಕೂಡಿದೆ. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿರುವುದು ವೇದ್ಯವಾಗುತ್ತದೆ ಎಂದು ಬೆಳ್ತಂಗಡಿ ಶಾಸಕ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಹರೀಶ್ ಪೂಂಜ ಲೇವಡಿ ಮಾಡಿದರು.

ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ತಂಗಡಗಿ ಹೇಳಿಕೆಯನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಅವರಿಗೆ ತಾಕತ್ತಿದ್ದರೆ ಮೊದಲು ಕಾಂಗ್ರೆಸ್ ಸರ್ಕಾರವನ್ನು ಸರಿದಾರಿಗೆ ತರಲಿ. ಸ್ವತಃ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದೂ ದಲಿತ, ಹಿಂದುಳಿದ ವರ್ಗದವರ ಕುರಿತ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದ ಧೋರಣೆಯನ್ನು ಸರಿಪಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. 

ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ಹಣ ಹೊಂದಿಸಲು ದಲಿತ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನೂ ದುರ್ಬಳಕೆ ಮಾಡಿಕೊಂಡಿದೆ. ಕಳೆದ ವರ್ಷ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೊಟಿ ರು. ಹಾಗೂ ಈ ವರ್ಷ 14 ಸಾವಿರ ಕೋಟಿ ರು.ಗಳನ್ನು ಬಿಟ್ಟಿ ಭಾಗ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಟೀಕಿಸಿದರು.

ನರೇಂದ್ರ ಮೋದಿಯವರ ಆಡಳಿತದಲ್ಲಿ ಯುವಕರು ತಮ್ಮದೇ ದೇಶದ ನೂರಾರು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಸಂಸ್ಥೆಗಳನ್ನು ಶುರುಮಾಡಿದ್ದಾರೆ. ಅದಕ್ಕಾಗಿಯೇ ಮೋದಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಕಾಂಗ್ರೆಸ್‌ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. 2022-23 ರಲ್ಲಿ 5.20 ಲಕ್ಷ ಯುವಕರು ಪದವಿ ಪಡೆದಿದ್ದಾರೆ. ಆದರೆ ಕಾಂಗ್ರೆಸ್‌ ಯುವನಿಧಿ ಯೋಜನೆಯಡಿಯಲ್ಲಿ ಕೇವಲ 3,500 ಯುವಕರಿಗೆ ಹಣ ಸಿಕ್ಕಿದೆ ಎಂದು ಅವರು ಹೇಳಿದರು.