ಲೋಕಸಭಾ ಚುನಾವಣೆ: "ಸೌಜನ್ಯಾ ಹೋರಾಟ ಸಮಿತಿಯಿಂದ ನೋಟ ಅಭಿಯಾನ"

ಸೌಜನ್ಯಾ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ಸೌಜನ್ಯಾ ಪರ ಹೋರಾಟ ಸಮಿತಿ ನೋಟ ಅಭಿಯಾನ ಹಮ್ಮಿಕೊಂಡಿದ್ದು, ಹೋರಾಟಗಾರರು ಈ ಬಾರಿ ನೋಟ ಮತ ಚಲಾಯಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ ಎಂದು ಸಮಿತಿಯ ಮುಖಂಡ ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ. 

ನಗರದ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣ ಮಾತ್ರವಲ್ಲ ಅದಕ್ಕಿಂತಲೂ ಹಿಂದೆ ನಡೆದ ಆನೆ ಮಾವುತ ಪ್ರಕರಣ, ಪದ್ಮಾವತಿ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಡೆದ ಎಲ್ಲಾ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗನೀಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರುವುದಾಗಿ ಹೇಳಿದರು. 

ನೋಟ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದು ನ್ಯಾಯಾಲಯವೇ ಹೇಳಿದೆ. ಚುನಾವಣಾ ಆಯೋಗವೂ ನಮ್ಮ ಈ ಅಭಿಯಾನಕ್ಕೆ ಸಹಕಾರ ನೀಡುವ ಜೊತೆ ಹೆಣ್ಣು ಮಕ್ಕಳ ಬಗ್ಗೆ ಪ್ರಾಧಾನ್ಯತೆ ನೀಡುವ ಈ ಅಭಿಯಾನಕ್ಕೆ ಜನರು ಸಹಕಾರ ನೀಡಬೇಕು ಎಂದರು. 

ಚುನಾವಣೆ ಹಿನ್ನೆಲೆಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸಲು ನಿರ್ಬಂಧ ಇದೆ. ಆದರೆ ಸಂಘದ ಹೆಸರಿನಲ್ಲಿ ಬಡ್ಡಿ ದಂಧೆಯಲ್ಲಿ ಸಂಗ್ರಹಿಸಿದ ಅಕ್ರಮ ಲಕ್ಷಗಟ್ಟಲೆ ಹಣ ಶುಕ್ರವಾರ, ಶನಿವಾರ ನಿರ್ಭೀತಿಯಿಂದ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಗಿರೀಶ್ ಮಟ್ಟಣ್ಣನವರ್, ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ದ.ಕ. ಹಾಗೂ ಉಡುಪಿಯ ಕರಾವಳಿ ಭಾಗದಲ್ಲಿ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಸುಳ್ಯದಲ್ಲಿ ಎ.24ರಂದು ನೋಟ ಜನಜಾಗೃತಿ ಸಭೆ ನಡೆಸುತ್ತಿರುವುದಾಗಿ ಪ್ರಸನ್ನ ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಮ್ಮಣ್ಣ ಶೆಟ್ಟಿ, ಜಯನ್ ಉಪಸ್ಥಿತರಿದ್ದರು.