ಮಂಗಳೂರು : ಲೋಕಾಯುಕ್ತ ಸೋಗಿನಲ್ಲಿ ಕಂದಾಯ ಅಧಿಕಾರಿಗೆ ಬೆದರಿಕೆ - ಪ್ರಕರಣ ದಾಖಲು

ಕಂದಾಯ ಅಧಿಕಾರಿಗೆ ಅಪರಿಚಿತ ವ್ಯಕ್ತಿಯೋರ್ವ ಲೋಕಾಯುಕ್ತ ಪೊಲೀಸ್ ಸೋಗಿನಲ್ಲಿ ಲಂಚದ ಬೇಡಿಕೆ

ಉಳ್ಳಾಲ : ಸೋಮೇಶ್ವರ ಪುರಸಭೆ ಕಂದಾಯ ಅಧಿಕಾರಿಗೆ ಅಪರಿಚಿತನೊಬ್ಬ ಲೋಕಾಯುಕ್ತ ಪೊಲೀಸ್‌ ಸೋಗಿನಲ್ಲಿ ಕರೆ ಮಾಡಿ ಲಂಚದ ಬೇಡಿಕೆಯಿಟ್ಟು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಪುರುಷೋತ್ತಮ ದ.ಕ. ಲೋಕಸಭಾ ಕ್ಷೇತ್ರದ ಸಂಚಾರಿ ತಂಡದಲ್ಲಿ (ಫೈಯಿಂಗ್ ಸ್ಕ್ಯಾಡ್) ಕರ್ತವ್ಯ ನಿರ್ವಹಿಸುತ್ತಿದ್ದರು. ಏಪ್ರಿಲ್. 5ರಂದು ಮಧ್ಯಾಹ್ನದವರೆಗೆ ಎಂದಿನಂತೆ ಸೋಮೇಶ್ವರ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮಧ್ಯಾಹ್ನ ವೇಳೆಗೆ ಅಪರಿಚಿತನೊಬ್ಬನಿಂದ ಅವರಿಗೆ ವಾಟ್ಸ್‌ಆ್ಯಪ್ ಕರೆಯೊಂದು ಬಂದಿದೆ.

ಅತ್ತಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ, 'ಲೋಕಾಯುಕ್ತದಿಂದ ಮಾತನಾಡುತ್ತಿದ್ದೇವೆ. ನಿಮ್ಮ ವಿರುದ್ಧ ದೂರು ಬಂದಿದೆ. ಸಾಹೇಬರು ಮಾತನಾಡುತ್ತಾರೆ ಎಂದು ಬೇರೊಬ್ಬ ವ್ಯಕ್ತಿಗೆ ಫೋನ್ ಕೊಟ್ಟಿದ್ದಾನೆ. ಆತ ನಿಮ್ಮ ಕಚೇರಿಗೆ ಬರುವ ಮೊದಲು ಈ ವಿಚಾರವನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ ಮೊದಲು ಮಾತನಾಡಿದ್ದ ವ್ಯಕ್ತಿಗೆ ಫೋನ್ ಕೊಟ್ಟಿದ್ದ. ಅಲ್ಲದೇ 80 ಸಾವಿರ ರೂ.ವನ್ನು ಫೋನ್ ಪೇ ಮೂಲಕ ಕಳುಹಿಸಲು ಹೇಳಿದ್ದರು ಎನ್ನಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ, 'ತನಗೆ 9 ತಿಂಗಳಿನಿಂದ ಸಂಬಳ ಆಗಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರೆ ಮಾಡಿದ ವ್ಯಕ್ತಿ 50 ಸಾವಿರ ರೂ. ಫೋನ್ ಪೇ ಮೂಲಕ ಕಳುಹಿಸಬೇಕು. ಇಲ್ಲದಿದ್ದರೆ ತೊಂದರೆ ಆಗುತ್ತದೆ ಎಂದು ಬೆದರಿಕೆ ಹಾಕಿದ್ದರು.

ಆದರೆ ಪುರುಷೋತ್ತಮ ಅವರು ಕರೆ ಕಟ್ ಮಾಡಿದ್ದಾರೆ. ಬಳಿಕ ಕರೆ ಬಂದ ಮೊಬೈಲ್‌ ನಂಬ‌ರ್ ಟೂ ಕಾಲರ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ 'ಡಿ. ಪ್ರಭಾಕರ, ಲೋಕಾಯುಕ್ತ ಪಿ.ಐ' ಎಂದು ತೋರಿಸಿತ್ತು. ಲೋಕಾಯುಕ್ತ ಮಂಗಳೂರು ಕಚೇರಿಯಲ್ಲಿ ವಿಚಾರಿಸಿದಾಗ ಅಂತಹ ಹೆಸರಿನ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಇಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಂದಾಯ ಅಧಿಕಾರಿ ಪುರುಷೋತ್ತಮ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.