ಕುಂದಾಪುರ: ಸಿಇಐಆರ್ ಪೋರ್ಟಲ್ ಮೂಲಕ ದೂರು - 13 ಮೊಬೈಲ್‌ಗಳ ಪತ್ತೆ.!

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ 13 ಮೊಬೈಲ್‌ಗಳ ಹಸ್ತಾಂತರ

ಕುಂದಾಪುರ : ಕಳೆದ ಮೂರು ತಿಂಗಳ ಅವಧಿಯಲ್ಲಿ ಕುಂದಾಪುರ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದ ಒಟ್ಟು 13 ಮೊಬೈಲ್ ಫೋನ್‌ಗಳನ್ನು ವಾರೀಸುದಾರರಿಗೆ ಕುಂದಾಪುರ ಠಾಣೆಯಲ್ಲಿ ಹಸ್ತಾಂತರಿಸಲಾಯಿತು. 

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಬೆಳಿಗ್ಗೆ ಐದು ಮಂದಿಗೆ ಮೊಬೈಲ್ ವಾಪಾಸ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ನಿರೀಕ್ಷಕ ಯು.ಬಿ. ನಂದಕುಮಾರ್, ಈವರೆಗೆ ಒಟ್ಟು 53 ಮೊಬೈಲ್‌ಗಳನ್ನು ಸಿ.ಇ.ಐ.ಆರ್ ತಂತ್ರಾಂಶದ ಮೂಲಕ ಪತ್ತೆಹಚ್ಚಿ ಅದರ ಮಾಲೀಕರಿಗೆ ಈಗಾಗಲೇ ನೀಡಲಾಗಿದ್ದು ಈ ಬಾರಿ ದೂರದ ಕೇರಳ, ಮದ್ರಾಸ್, ಮೈಸೂರು ಹಾಗೂ ಬೆಂಗಳೂರು ಸಹಿತ ವಿವಿದೆಡೆಯಿಂದ ಮೊಬೈಲ್ ಪತ್ತೆ ಮಾಡಲಾಗಿದೆ ಎಂದರು. 

ಮೊಬೈಲ್ ಕಳೆದುಕೊಂಡ ವಾರೀಸುದಾರರಾದ ದೀಪಕ್ ಸುರತ್ಕಲ್ ಮತ್ತು ದೀಕ್ಷಾ ಗುಜ್ಜಾಡಿ ಮಾತನಾಡಿ, ನಾವು ಅಕಸ್ಮಿಕವಾಗಿ ಮೊಬೈಲ್ ಕಳೆದು ಕೊಂಡೆವು. ಹುಡುಕಾಡಿದರೂ ಸಿಗಲಿಲ್ಲ. ವಾಪಾಸ್ ಸಿಗುವ ಭರವಸೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಕೆಲವೇ ತಿಂಗಳಿನಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ ಪತ್ತೆ ಹಚ್ಚಿ ಪೊಲೀಸರು ನೀಡಿದ್ದಾರೆ ಎಂದು ಹೇಳಿದರು.

 ಉಡುಪಿ ಎಸ್ಪಿಡಾ.ಅರುಣ್ ಕೆ. ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ.ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಯು.ಬಿ.ನಂದಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಠಾಣಾ ಉಪನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ, ಪ್ರಸಾದ್ ಕುಮಾರ್ ಕೆ. ಹಾಗೂ ಸಿಬ್ಬಂದಿ ಸಿದ್ದಪ್ಪ ಸಕನಳ್ಳಿ, ಮಾರುತಿ ನಾಯ್ಕ ತಾಂತ್ರಿಕ ಸಿಬ್ಬಂದಿ ಅಶ್ವಿನ್ ಕುಮಾರ್ ಭಾಗವಹಿಸಿದ್ದರು. 

"ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನುಗಳನ್ನು ಸಿ.ಇ.ಐ.ಆರ್. ಪೋರ್ಟಲ್‌ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರು ಪತ್ತೆ ಮಾಡಲು ಅನುಕೂಲ ವಾಗುತ್ತದೆ. ಅಲ್ಲದೆ ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಹೀಗಾಗಿ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ವಿವರಗಳನ್ನು ಈ ಪೋರ್ಟಲ್‌ನಲ್ಲಿ ದಾಖಲಿಸಬೇಕು". - ಡಾ.ಅರುಣ್ ಕೆ., ಎಸ್ಪಿ ಉಡುಪಿ