ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ಆರೋಪಿಗಳು ಅರೆಸ್ಟ್.!

ನಟ ಸಲ್ಮಾನ್‌ ಖಾನ್‌ ಮುಂಬೈ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ, ಇಬ್ಬರ ಬಂಧನ

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮುಂಬೈ ನಿವಾಸದ ಮೇಲೆ ನಡೆಸಿದ ಗುಂಡಿನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ  ಕ್ರೈಂ ಬ್ರಾಂಚ್ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಮುಂಬೈನ ಬಾಂದ್ರ ಕ್ರೈಂ ಬ್ರಾಂಚ್‌ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ನೇತೃತ್ವದ ತಂಡ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಸಿಹಿ ಮೂಲದ ವಿಕ್ಕಿ ಸಾಹಬ್ ಗುಪ್ತಾ (24) ಮತ್ತು ಸಾಗರ್ ಶ್ರೀಜೋಗೇಂದ್ರ ಪಾಲ್ (21) ಬಂಧಿತ ಆರೋಪಿಗಳಾಗಿದ್ದಾರೆ. ಗುಜರಾತ್‌ನ ಭುಜ್ ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಇಂದು ಮುಂಬೈಗೆ ಕರೆತರಲಾಗುವುದು.

ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಗುಂಡಿನ ದಾಳಿ ನಡೆದಾಗ ಸಲ್ಮಾನ್ ಖಾನ್ ಅವರು ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ.ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಘಟನೆಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ಹೇಳಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ವಾಂಟೆಡ್ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹಲವಾರು ಬೆದರಿಕೆಯನ್ನು ಹಾಕಿದ್ದಾರೆ. ಮೂಲಗಳ ಪ್ರಕಾರ ನಟನನ್ನು ಕೊಲ್ಲಲು ಬಿಷ್ಣೋಯಿ ಮತ್ತು ಬ್ರಾರ್ ತಮ್ಮ ಶೂಟರ್‌ಗಳನ್ನು ಮುಂಬೈಗೆ ಕಳುಹಿಸಿದ್ದರು ಎನ್ನಲಾಗಿದೆ.