ಪಾಕಿಸ್ತಾನದ ಯುವತಿಗೆ ಭಾರತೀಯ ವ್ಯಕ್ತಿಯ ಹೃದಯ ಕಸಿ

ಮೆದುಳು ನಿಷ್ಕ್ರಿಯಗೊಂಡ 69 ವರ್ಷದ ಭಾರತೀಯ ರೋಗಿಯ ಹೃದಯ ಜೋಡನೆ
35 ಲಕ್ಷ ರೂ. ವೆಚ್ಚವಾಗುವ ಶಸ್ತ್ರಚಿಕಿತ್ಸೆ ಉಚಿತ

ಹಲವು ವರ್ಷಗಳಿಂದ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನ ಮೂಲದ ಯುವತಿಗೆ ಇತ್ತೀಚೆಗಷ್ಟೇ ಭಾರತೀಯ ದಾನಿಯ ಹೃದಯವನ್ನು ಕಸಿ ಮಾಡಲಾಗಿದೆ. ಮೆದುಳು ನಿಷ್ಕ್ರಿಯಗೊಂಡ 69 ವರ್ಷದ ಭಾರತೀಯ ರೋಗಿಯ ಹೃದಯವನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ನಲ್ಲಿ ಪಾಕಿಸ್ತಾನ ಮೂಲದ ಹತ್ತೊಂಬತ್ತರ ಹರೆಯದ ಆಯೇಶಾ ರಶನ್ ಎಂಬ ಯುವತಿಗೆ ಜೋಡಿಸಲಾಗಿದೆ. ಮತ್ತೊಂದು ವಿಶೇಷತೆ ಏನೆಂದರೆ ಬರೋಬ್ಬರಿ 35 ಲಕ್ಷ ರೂ. ವೆಚ್ಚವಾಗುವ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮತ್ತು ಎನ್‌ಜಿಒ ಐಶ್ವರ್ಯಂ ಟ್ರಸ್ಟ್‌ ಸೇರಿ ಉಚಿತವಾಗಿ ನಿರ್ವಹಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಯೇಷಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದು 2019 ರಲ್ಲಿ ಆಗಲೇ ಹೃದಯ ಸ್ತಂಭನದಿಂದ ಬಳಲುತ್ತಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದರು. ಇದರಿಂದ ಪೂರ್ಣ ಹೃದಯ ಕಸಿ ಅನಿವಾರ್ಯವಾಗಿತ್ತು. ಕೆಲ ವರ್ಷಗಳ ವರೆಗೆ ಯುವತಿಗೆ ಹೃದಯಕ್ಕೆ ಬ್ಲೆಡ್ ಪಂಪ್ ಮಾಡಲು ಕೃತಕ ಮೆಷಿನ್ ಅಳವಡಿಸಲಾಗಿತ್ತು. ಈ ವೇಳೆ ಯುವತಿಯ ಪೋಷಕರು  ಹೃದಯ ಕಸಿಗಾಗಿ ಹೃದಯದಾನಿಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಡಾ.ಕೆ.ಆರ್.ಬಾಲಕೃಷ್ಣನ್ ಮತ್ತು ಡಾ.ಸುರೇಶ್ ರಾವ್ ಆಯೇಷಾ ಕುಟುಂಬದೊಡನೆ  ಹೃದಯ ಕಸಿಗೆ ಮಾಡುವ ಬಗ್ಗೆ ಮಾತನಾಡಿದ್ದರು.

ಇದೀಗಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಯುವತಿಯನ್ನು ಏಪ್ರಿಲ್ 17 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​​​​ ಮಾಡಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಯುವತಿ “ನಾನು ಈಗ ಸುಲಭವಾಗಿ ಉಸಿರಾಡಬಲ್ಲೆ. ಕರಾಚಿಯಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದೇನೆ. ನಾನು ಫ್ಯಾಷನ್ ಡಿಸೈನರ್ ಆಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.