ನವೀನ್ ಡಿ ಪಡೀಲ್ ಅವರಿಗೆ ರಂಗಭಾಸ್ಕರ ಪ್ರಶಸ್ತಿ ಘೋಷಣೆ

ಸಂಗಾತಿ 16ನೇ ವಾರ್ಷಿಕೋತ್ಸವ
ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ರಂಗನಟ ನವೀನ್‌ ಡಿ. ಪಡೀಲ್‌ ಅವರಿಗೆ ಘೋಷಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ, ರಂಗಕರ್ಮಿ ದಿ| ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ಪ್ರಶಸ್ತಿಯನ್ನು ನವೀನ್‌ ಡಿ. ಪಡೀಲ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಮೇ 3ರಂದು ಸಂಜೆ 5.30ಕ್ಕೆ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ಶ್ರೀ ಶಾರದಾ ಸೇವಾ ಸಮಿತಿ ಸಹಯೋಗದೊಂದಿಗೆ ನಡೆಯಲಿರುವ, ದಿ| ಪಣಂಬೂರು ಜನಾರ್ದನ ರಾವ್‌ ಸ್ಮರಣಾರ್ಥ ನೀಡಲಾಗುವ ವಾರ್ಷಿಕ ರಂಗ ಪ್ರಶಸ್ತಿಯನ್ನು ಹಿರಿಯ ನಟಿ, ಬಹುಮುಖ ಪ್ರತಿಭೆ ಸಾವಿತ್ರಿ ಶ್ರೀನಿವಾಸ ರಾವ್‌ ಅವರಿಗೆ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಅಗರಿ ರಾಘವೇಂದ್ರ ರಾವ್‌, ರಂಗಸಂಗಾತಿ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ, ಕೆನರಾ ವಿದ್ಯಾ ಸಂಸ್ಥೆಯ ರಂಗನಾಥ ಭಟ್‌, ಪ್ರಸಿದ್ಧ ರಂಗ ನಿರ್ದೇಶಕ ಡಾ| ಜೀವನ್‌ ರಾಮ್‌ ಸುಳ್ಯ, ವಿಕ್ರಮ್‌ ದತ್ತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ದಯಾನಂದ ರಾವ್‌ ಕಾವೂರು ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭ ರಂಗಸಂಗಾತಿ ಬಳಗದಿಂದ “ನೆಮ್ಮದಿ ಅಪಾರ್ಟ್‌ ಮೆಂಟ್‌ ಬ್ಲಾಕ್‌ ಬಿ’ ಎಂಬ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಚನೆ ಶಶಿರಾಜ್‌ ಕಾವೂರು, ವಿನ್ಯಾಸ ಮತ್ತು ನಿರ್ದೇಶನ ಮೋಹನಚಂದ್ರ ಯು. ಸಂಗೀತ ಮೈಮ್‌ ರಾಮದಾಸ್‌, ಸಂಗೀತ ನಿರ್ವಹಣೆ ಸಂದೀಪ್‌ ಮಧ್ಯ, ಬೆಳಕು ಕ್ರಿಸ್ಟಿ. ರಂಗದಲ್ಲಿ ಲಕ್ಷ್ಮಣ ಕುಮಾರ್‌ ಮಲ್ಲೂರು, ಗೋಪಿನಾಥ್‌ ಭಟ್‌, ಸಂತೋಷ್‌ ಶೆಟ್ಟಿ, ಮುರಳೀಧರ ಕಾಮತ್‌, ಮೈಮ್‌ ರಾಮದಾಸ್‌, ಹರಿಪ್ರಸಾದ್‌ ಕುಂಪಲ, ಮಂಜುಳ ಜನಾರ್ದನ, ಮಧುರ ಆರ್‌.ಜಿ., ರಂಜನ್‌ ಬೋಳೂರು, ನವೀನ್‌ ಡಿ ಪಡೀಲ್‌ ಮತ್ತು ಪ್ರಸಿದ್ಧ ಕಿರುತೆರೆ ನಟ ಶೋಭರಾಜ್‌ ಪಾವೂರು ಮತ್ತಿತರರು ಅಭಿನಯಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ರಂಗಸಂಗಾತಿಯ ಪ್ರಮುಖರಾದ ಸುರೇಶ್‌ ಬೆಳ್ಚಡ ಕೊಳಂಬೆ, ಚಂದ್ರಶೇಖರ ಕೂಳೂರು, ರಂಜನ್‌ ಬೋಳೂರು ಇದ್ದರು.