ಮಂಗಳೂರು : ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ..!

"ಮೂರು ವಿಮಾನದಲ್ಲಿ ಬಾಂಬ್ ಇಡಲಾಗಿದೆ
ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ" - ಇಮೇಲ್ ಸಂದೇಶ

ಮಂಗಳೂರು: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಕರೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಗ್ರರ ಹೆಸರಲ್ಲಿ ಇ-ಮೇಲ್ ಬಂದಿದ್ದು, ”ವಿಮಾನ ನಿಲ್ದಾಣದ ಆವರಣದಲ್ಲಿ ಸ್ಫೋಟಕಗಳನ್ನ ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ. ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ” ಎಂದು ಏಪ್ರಿಲ್ 29 ರಂದು ಬೆದರಿಕೆ ಕರೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಎಚ್‌ಎಂಟಿ ಮೈದಾನ ಬಳಿಯ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿತ್ತು. ಕೂಡಲೆ ಹೊಟೇಲ್ ಗೆ ತೆರಳಿದ್ದ ಜಾಲಹಳ್ಳಿ ಠಾಣೆ ಪೊಲೀಸರು ಹೋಟೆಲ್ ನಲ್ಲಿದ್ದ ಗ್ರಾಹಕರನ್ನು ಹೊರಕಳಿಸಿ ಪರಿಶೀಲನೆ ನಡೆಸಿದ್ದರು.