ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ - ದೊಡ್ಡ ಮಟ್ಟದ ಯೋಜನೆಗೆ ಸಿದ್ಧತೆ.!

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಉಡುಪಿ:ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಸುರಂಗ (ಟನಲ್‌) ನಿರ್ಮಾಣ ಯೋಜನೆ ಈಗ ಮುನ್ನೆಲೆಗೆ ಬಂದಿದೆ.

ಉಡುಪಿಯಿಂದ ಶಿವಮೊಗ್ಗ ಜಿಲ್ಲೆಗೆ ಸಾಗಲು ಆಗುಂಬೆ ಘಾಟಿ ಮಾರ್ಗವೇ ಪ್ರಧಾನವಾದುದು. ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರ ದುಸ್ತರ. ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆ ಗುಡ್ಡ ಕುಸಿತ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎರಡೂ ಜಿಲ್ಲಾಡಳಿಗಳು ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಸಣ್ಣ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡುತ್ತವೆ. ಮರ ಬಿದ್ದು, ಗುಡ್ಡ ಕುಸಿದು ಸಂಚಾರ ಸಂಪೂರ್ಣ ನಿರ್ಬಂಧಿಸಿದ್ದ ಘಟನೆಗಳೂ ಈ ಹಿಂದೆ ನಡೆದಿದ್ದವು. ಹೀಗಾಗಿಯೇ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಬಹಳ ಕಾಲದ್ದಾಗಿದೆ. ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಶಿವಮೊಗ್ಗಕ್ಕೆ ಬಂದಿದ್ದ ಸಂದರ್ಭ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿತ್ತು. ಅದರಂತೆ ಯೋಜನೆ ಅನುಷ್ಠಾನ ಸಾಧ್ಯವೇ ಎಂಬಿತ್ಯಾದಿ ಸಾಧಕ ಬಾಧಕಗಳನ್ನು ತಿಳಿಯಲು ಕಾರ್ಯಾರಂಭ ಮಾಡಲಾಗಿದೆ.

ಡಿಪಿಆರ್‌ಗೆ 2 ಕೋ ರೂ - ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದ್ದು. ಇದಕ್ಕಾಗಿ 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯೋಜನೆಯ ರೂಪುರೇಷೆ, ಅನುಕೂಲ ಮತ್ತು ಅನನುಕೂಲ, ಅನುಷ್ಠಾನ ವೆಚ್ಚ ಹಾಗೂ ತಗಲುವ ಸಮಯ, ಆ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಇತ್ಯಾದಿ ಅಂಶಗಳುಳ್ಳ ಡಿಪಿಆರ್‌ ಸಿದ್ಧವಾಗಬೇಕಿದೆ.

ಹೆಬ್ರಿ ತಾಲೂಕಿನ ಸೋಮೇಶ್ವರ ಆರಂಭ - ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ  ಸಂಪರ್ಕ - ಸುಮಾರು 12 ಕಿ.ಮೀ. ದೂರ.

ಯೋಜನೆಯ ಆರಂಭಿಕ ವೆಚ್ಚ 3,000 ಕೋ.ರೂ.ಗಳಿಂದ 3,500 ಕೋ.ರೂ. ಎಂದು ಅಂದಾಜಿಸಲಾಗಿದೆ. ಕಾಮಗಾರಿ ಆರಂಭದ ಬಳಿಕ ಯೋಜನಾ ವೆಚ್ಚದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ. ಸದ್ಯ ಮಲ್ಪೆ- ತೀರ್ಥಹಳ್ಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೂ ನಡೆಯುತ್ತಿದೆ. ಇದರಲ್ಲಿಯೇ ಸುರಂಗ ಮಾರ್ಗ ಸೇರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.