ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ, ಪ್ರತ್ಯೇಕ ಕಾಲೇಜು ನಿರ್ಮಾಣ

ಅಡ್ಯಾರ್‌ ಕಣ್ಣೂರು ಸೇರಿ 10 ಕಡೆಗಳಲ್ಲಿ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮುಂದು

ದಕ್ಷಿಣ ಕನ್ನಡದ ಅಡ್ಯಾರ್‌ ಕಣ್ಣೂರು ಸೇರಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು,ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ ಹೀಗೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ 10 ಪ್ರದೇಶಗಳಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ. ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳ ನಿರ್ಮಾಣವಾಗಲಿದೆ.

ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಕಾಲೇಜು ಸ್ಥಾಪನೆಗೆ ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಈ ಹಿಂದೆ ನಿರ್ಣಯ ಕೈಗೊಳ್ಳಲಾಗಿದ್ದು, ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ದೊರೆಕಿತ್ತು. ಪ್ರತಿ ಕಾಲೇಜಿಗೆ 2.50 ಕೋಟಿ ರೂ.ಅನುದಾನವನ್ನೂ ಮೀಸಲಿರಿಸಲಾಗಿದ್ದು, ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಈ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ. ಸಿಎಂ ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ.