ಕಾರ್ಕಳ ಕೋಟೆಯಲ್ಲಿ 300ಕ್ಕೂ ಹೆಚ್ಚು ಫಿರಂಗಿ ಗುಂಡುಗಳು ಪತ್ತೆ

ಫಿರಂಗಿ ಗುಂಡುಗಳು ಪತ್ತೆ

ಕಾರ್ಕಳ: ಇಕ್ಕೇರಿ ನಾಯಕ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕಾರ್ಕಳ ಕೋಟೆಯಲ್ಲಿ 300ಕ್ಕೂ ಹೆಚ್ಚು ಫಿರಂಗಿ ಗುಂಡುಗಳು ಪತ್ತೆಯಾಗಿವೆ.

ಇಕ್ಕೇರಿ ನಾಯಕನ ಅಧಿಕಾರದ ಬಳಿಕ ಕಾರ್ಕಳ ಕೋಟೆ ಟಿಪ್ಪುವಿನ ಪಾಲಾಗಿತ್ತು. ಆ ಕಾಲವಧಿಯಲ್ಲಿ ಫಿರಂಗಿಗಾಗಿ ಬಳಸುತ್ತಿದ್ದ ಬೆಣಚ್ಚು ಕಲ್ಲಿನಿಂದ ಸಿದ್ಧಪಡಿಸಲಾಗಿದ್ದ ವಿವಿಧ ಗಾತ್ರಗಳ ಗುಂಡು ಅದಾಗಿವೆ. ಟಿಪ್ಪುವಿನ ಅಧಿಕಾರವಧಿಯ ಬಳಿಕ ಬ್ರಿಟಿಷರ ಪಾಲಾಗಿದ್ದ ಇದೇ ಕೋಟೆಯಲ್ಲಿ ಟಿಪ್ಪು ಪರವಾಗಿ ಅಧಿಕಾರ ಹೊಂದಿದ್ದ ಕುಟುಂಬವೊಂದು ಇದೇ ಕೋಟೆಯ ಪರಿಧಿಯಲ್ಲಿ ವಾಸಮಾಡಿಕೊಂಡಿತ್ತಲ್ಲದೇ ಭೂಮಿಯ ಅಧಿಕಾರ ಹೊಂದಿತ್ತೆನ್ನಲಾಗಿದೆ.

ಇತ್ತೀಚೆಗೆ ಕಾರ್ಕಳ ಕೋಟೆಯನ್ನು ಕೆಲವು ಉದ್ಯಮಿಗಳು ಖರೀದಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿ ಅಲ್ಲಿಯ ಭೂಮಿಯನ್ನು ಅಗೆಯುವ ಕಾಮಗಾರಿ ತೊಡಗಿದ್ದಾಗ ಭೂಮಿಯ ಸುಮಾರು ಐದಡಿ ಆಳದಲ್ಲಿ ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಪುರಂದರ ಹೆಗ್ಡೆ ಘಟನಾ ಸ್ಥಳಕ್ಕೆ ಅಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ವಿವಿಧ ಗಾತ್ರದ ಸುಮಾರು 300ಕ್ಕೂ ಹೆಚ್ಚು ಗುಂಡುಗಳನ್ನು ಸಂಗ್ರಹಿಸಿ ಅವುಗಳನ್ನು ಕಾರ್ಕಳ ಪೊಲೀಸರ ವಶಕ್ಕೆ ನೀಡಿದ್ದಾರೆ. ಸಣ್ಣ ಗಾತ್ರದ ಗುಂಡು ಸುಮಾರು ಅರ್ಧ ಕೆ.ಜಿ.ಯಷ್ಟಿದರೆ, ದೊಡ್ಡ ಗಾತ್ರದ ಗುಂಡು 1 ಕೆ.ಜಿ ಭಾರ ಹೊಂದಿದೆ ಎಂದು ಕಂದಾಯ ಮೂಲಗಳಿಂದ ತಿಳಿದುಬಂದಿದೆ.