"KGF​ ನೆಲದಲ್ಲಿ ಚಿನ್ನದ ಕೃಷಿ ಆರಂಭ" - ಟೆಂಡರ್ ಕರೆದ ಕೇಂದ್ರ

KGF ಚಿನ್ನದ ಗಣಿಯಲ್ಲಿ ಮತ್ತೆ ಹೊಳೆಯುವ ಚಿನ್ನ

ಕೇಂದ್ರ ಸರ್ಕಾರದ ನಿರ್ಧಾರವನ್ನು ನೋಡಿದ್ರೆ 22 ವರ್ಷಗಳ ನಂತರ ಕೆಜಿಎಫ್​ಗೆ ಹಿಡಿದ ಗ್ರಹಣ ಬಿಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಮತ್ತೆ ಕೆಜಿಎಫ್​ ನೆಲದಲ್ಲಿ ಚಿನ್ನದ ಕೃಷಿ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಕೆಜಿಎಫ್​ ನಲ್ಲಿ ಸುವರ್ಣಯುಗ ಆರಂಭವಾಗೋದರಲ್ಲಿ ಅನುಮಾನವಿಲ್ಲ. 22 ವರ್ಷಗಳ ನಂತರ ವಿಶ್ವ ಪ್ರಸಿದ್ದ ಕೆಜಿಎಫ್​ ಚಿನ್ನದ ಗಣಿಯಲ್ಲಿ ಮತ್ತೆ ಚಿನ್ನ ಹೊಳೆಯುವ ಸಾಧ್ಯತೆ ಗೋಚರವಾಗುತ್ತಿದೆ. ಕೆಜಿಎಫ್​ನಲ್ಲಿ ಚಿನ್ನ ತೆಗೆಯಲು ಮನಸ್ಸು ಮಾಡಿರುವ ಕೇಂದ್ರ ಸರ್ಕಾರ ಎರಡು ದಶಕಗಳ ನಂತರ ಕೆಜಿಎಫ್​  ಚಿನ್ನದ ಗಣಿಯ ಬಗ್ಗೆ ಆಸಕ್ತಿ ವಹಿಸಿರುವುದು ಸಂತಸ ತಂದಿದೆ. ಆದರೆ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಮರೆತಿರುವುದು ಅಷ್ಟೇ ಬೇಸರ ಮೂಡಿಸಿದೆ.

ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಹೆಗ್ಗಳಿಗೆ ಕೋಲಾರದ ಕೆಜಿಎಫ್ ಚಿನ್ನದ ಗಣಿಗೆ ಸಲ್ಲುತ್ತದೆ. ಆದರೆ 2001ರಲ್ಲಿ ಚಿನ್ನದ ಗಣಿಗೆ ಬೀಗ ಹಾಕಿದ ನಂತರ, ಕೇಂದ್ರ ಸರ್ಕಾರ ಕೆಜಿಎಫ್ ಚಿನ್ನದ ಗಣಿಯನ್ನು ಇಲ್ಲಿನ ಕಾರ್ಮಿಕರನ್ನು ಅವರ ಸಂಕಷ್ಟಗಳು ಎಲ್ಲವನ್ನೂ ಮರೆತು ಹೋಗಿತ್ತು. ಚಿನ್ನದ ಗಣಿಗೆ ಬೀಗ ಹಾಕಿದ್ದ ಸರ್ಕಾರ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡದೇ, ನಿವೃತ್ತಿ ಪರಿಹಾರವನ್ನೂ ನೀಡಿರಲಿಲ್ಲ. ಸುಮಾರು 3,500 ಜನ ಕಾರ್ಮಿಕರಿಗೆ 52 ಕೋಟಿ ರೂಪಾಯಿ ಪರಿಹಾರ ನೀಡಬೇಕಿತ್ತು. ಯಾವುದನ್ನೂ ನೀಡದೆ ಚಿನ್ನದ ಗಣಿಗೆ ಬೀಗ ಹಾಕಿ ಸುಮ್ಮನಾಗಿತ್ತು. ಅತ್ತ ಕಾರ್ಮಿಕ ಸಂಘಟನೆಗಳು ಹತ್ತಾರು ವರ್ಷಕಾಲ ನ್ಯಾಯಕ್ಕಾಗಿ ಸರ್ಕಾರಗಳ ಬಳಿ, ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ. ಇನ್ನು ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ಏಕಾಏಕಿ ಸರ್ಕಾರ ಈಗ ಕೆಜಿಎಫ್‍ನಲ್ಲಿ ಇರುವ ಚಿನ್ನವನ್ನು ತೆಗೆದ ನಂತರ ಹೊರ ಹಾಕಿರುವ ಮಣ್ಣಿನಲ್ಲಿ ಅಂದರೆ ಕೆಜಿಎಫ್‍ನಲ್ಲಿರುವ 13 ಸೈನೈಡ್ ಗುಡ್ಡಗಳಲ್ಲಿ ಚಿನ್ನವನ್ನು ಮತ್ತೊಮ್ಮೆ ಶೋಧಿಸುವ ಕೆಲಸಕ್ಕೆ ಟೆಂಡರ್ ಕರೆದಿದೆ. 

ಕೆಜಿಎಫ್ ನಗರದ ಸುತ್ತಮುತ್ತ 13 ಸೈನೈಡ್ ಗುಡ್ಡಗಳಿದ್ದು ಅದರಲ್ಲಿ ಸುಮಾರು 35 ಲಕ್ಷ ಮಿಲಿಯನ್ ಟನ್ ಮಣ್ಣಿದೆ. ಸಂಶೋಧನೆಗಳ ಪ್ರಕಾರ ಒಂದು ಟನ್ ಮಣ್ಣಿನಲ್ಲಿ ಸರಾಸರಿ ಒಂದು ಗ್ರಾಮ್ ಚಿನ್ನ ಸಿಗುತ್ತದೆ. ಅದರಂತೆ 25 ಟನ್ ಚಿನ್ನ ಸಿಗುವ ನಿರೀಕ್ಷೆ ಇದೆ. ಸದ್ಯ ಆ ಮಣ್ಣಿನಲ್ಲಿ ಚಿನ್ನವನ್ನು ಹೊರತೆಗೆಯುವ ಕೆಲಸ ಆರಂಭಿಸಿದ್ದು ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಶುರುಮಾಡಿದೆ.  ಇನ್ನು 22 ವರ್ಷಗಳ ಹಿಂದೆ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆಲಸ ಕಳೆದುಕೊಂಡ ನಂತರ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದರು. ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದವು. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಕಾರ್ಮಿಕರಿಗೆ ಯಾವುದೇ ರೀತಿಯ ಪರಿಹಾರ ರೂಪಿಸಲಿಲ್ಲ. ಕೊನೆಯ ಪಕ್ಷ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ.  ಚಿನ್ನದ ಗಣಿಗೆ ಬೀಗ ಹಾಕಿದ ನಂತರ ಕೆಜಿಎಫ್‍ನ್ನು ಮರೆತೇ ಹೋಗಿತ್ತು. ಆದರೆ ಈಗ ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಇಷ್ಟು ದಿನ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಈಗ ಏಕಾಏಕಿ ಚಿನ್ನಕ್ಕಾಗಿ ಕೆಜಿಎಫ್ ಮೇಲೆ ಪ್ರೀತಿ ತೋರಿಸುವ ನಾಟಕ ಆಡುತ್ತಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಆರೋಪಿಸಿದ್ದಾರೆ.