ಉಡುಪಿ: ಮತ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಕಳ್ಳತನ – 40 ಲಕ್ಷ ಮೌಲ್ಯದ ಚಿನ್ನ ಕಳವು

ರೈಲಿನಲ್ಲಿ ಕಳ್ಳತನ

ಉಡುಪಿ : ಮತ್ಯಗಂಧ ಎಕ್ಸಪ್ರೇಸ್ ರೈಲಿನಲ್ಲಿ ಮುಂಬೈನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು 40 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು‌ ದೋಚಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ (44) ಎಂಬವರು ಮದುವೆ ಕಾರ್ಯಕ್ರಮಕ್ಕೆ ಉಡುಪಿಗೆ ಮತ್ಯಗಂಧ ರೈಲಿನಲ್ಲಿ ಆಗಮಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಧರಿಸುವುದಕ್ಕಾಗಿ ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಸೀರೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡಿದ್ದರು. ಡಿ.6ರಂದು ಬೆಳಗ್ಗೆ ಸುಮಾರು 5 ಗಂಟೆಗೆ ರೈಲು ಕುಂದಾಪುರ ಸ್ಟೇಷನ್ ತಲುಪಿದ್ದು, ಉಡುಪಿಯಲ್ಲಿ ಇಳಿಯುವುದಕ್ಕೆ ಇವರು ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದರು.

ರೈಲು ಮುಂಜಾನೆ 5.40 ಗಂಟೆಗೆ ಉಡುಪಿಯ ರೈಲು ಸ್ಟೇಷನ್ ಗೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್ ನಲ್ಲಿಟ್ಟಿರುವ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ ಆಗಿದ್ದು, ಒಟ್ಟು ಮೌಲ್ಯ 34 ಲಕ್ಷ ರೂ. ಆಗಬಹುದು ಹಾಗೂ ಕಳವಾದ ಡೈಮಂಡ್ ನ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೈಲಿನಲ್ಲಿದ್ದ 4 ಜನ 40 ರಿಂದ 50 ವರ್ಷ ವಯಸ್ಸಿನವರು ಚಿನ್ನಾಭರಣಗಳನ್ನು ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.