ಸುರತ್ಕಲ್: ವಿದ್ಯಾರ್ಥಿಗಳು ತಯಾರಿಸಿ ಬಿಟ್ರು "ಇ ಸ್ಪೆಷಲ್ ಬೈಕ್".!

ಅನೇಕ ವಿಶೇಷತೆ ಹೊಂದಿರುವ ಇಲೆಕ್ಟ್ರಿಕ್ ಬೈಕ್

ಮಂಗಳೂರು: ಸುರತ್ಕಲ್ ನ ಎನ್.ಐ.ಟಿ.ಕೆ ಕ್ಯಾಂಪಸ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಲೆಕ್ಟ್ರಿಕ್ ವಾಹನಗಳ ಅನ್ವೇಷಣೆಯನ್ನು ಮಾಡ್ತಿದ್ದಾರೆ. ಇದೀಗ ಇಲ್ಲಿನ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನಿಂದ ಸ್ಪೆಷಲ್ ಡರ್ಟ್ ಇ-ಬೈಕ್ ಒಂದನ್ನು ರೆಡಿ ಮಾಡಿದ್ದಾರೆ.

ಸದ್ಯ ಮಾರುಕಟ್ಟೆಗೆ ಬಂದಿರುವ ಇಲೆಕ್ಟ್ಟಿಕ್ ದ್ವಿಚಕ್ರ ವಾಹನಗಳಲ್ಲಿ ಆಫ್ ರೋಡ್ ಸಾಮರ್ಥ್ಯದ ದ್ವಿಚಕ್ರ ವಾಹನ ಬಹು ಕಡಿಮೆ. ಹೀಗಾಗಿ ಎನ್.ಐ.ಟಿ.ಕೆ ಸುರತ್ಕಲ್‌ನ ವಿದ್ಯಾರ್ಥಿಗಳು ಅನ್ವೇಷನೆ ಮಾಡಿರುವ ಈ ಡರ್ಟ್ ಇ-ಬೈಕ್‌ನ್ನು ಮೋಟಾರು ಕಂಪೆನಿಗಳು ಪಡೆದು ಅಭಿವೃದ್ದಿಗೊಳಿಸುವ ಸಾಧ್ಯತೆಯಿದೆ.

ಆಫ್ ರೋಡ್‌ನಲ್ಲಿ ಸಂಚರಿಸಲೆಂದು ಭಾವಿ ಇಂಜಿನಿಯರ್‌ಗಳು ಇದನ್ನು ಡಿಸೈನ್ ಮಾಡಿದ್ದಾರೆ. ಹಿಮಕುಸಿತ ವಲಯಗಳು, ಭೂಕುಸಿತ ಪ್ರದೇಶಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಇತರ ಸ್ಥಳಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಸಹ ಈ ಡರ್ಟ್ ಇ-ಬೈಕ್‌ನ್ನು ಬಳಸಬಹುದಾಗಿದೆ ಎನ್ನುತ್ತಾರೆ ಇ-ಮೊಬಿಲಿಟಿ ಸಂಶೋಧನ ವಿಭಾಗ-ಎನ್.ಐ.ಟಿ.ಕೆ ಮುಖ್ಯಸ್ಥರಾದ ಪೃಥ್ವಿರಾಜ್ ಯು.

1979 ರ ಎನ್.ಐ.ಟಿ.ಕೆಯ ಹಿರಿಯ ವಿದ್ಯಾರ್ಥಿಗಳು ಈ ಬೈಕ್ ವಿನ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ದು, SEG ಆಟೋಮೋಟಿವ್ ಸಹಭಾಗಿತ್ವದಲ್ಲಿ ಇದನ್ನು ರೆಡಿ ಮಾಡಲಾಗಿದೆ. ಈ ಬೈಕ್ ಬೆಟ್ಟ ಗುಡ್ಡಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಆಫ್-ರೋಡ್ ಸಾಮರ್ಥ್ಯದ ವಾಹನವಾಗಿದೆ. ಇದಕ್ಕಾಗಿ ಪವರ್‌ಫುಲ್ ಮೋಟಾರ್ ಬಳಕೆ ಮಾಡಲಾಗಿದೆ. ಮೂರರಿಂದ ನಾಲ್ಕು ಗಂಟೆಯಲ್ಲಿ ಫುಲ್ ಬ್ಯಾಟರಿ ಚಾರ್ಜ್ ಮಾಡಿದ್ರೆ ಸುಮಾರು 40 ಕಿಲೋ ಮೀಟರ್‌ವರೆಗೆ ಓಡಿಸಬಹುದಾಗಿದೆ. ಸದ್ಯ ಇದರ ನಿರ್ಮಾಣ ವೆಚ್ಚ ಸುಮಾರು ಎರಡು ಲಕ್ಷ ರೂಪಾಯಿಯಾಗಿದ್ದು ಮುಂದೆ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಿದ್ರೆ ಇನ್ನಷ್ಟು ಅಭಿವೃದ್ದಿಗೊಳಿಸಿ ತಯಾರಿಸುವ ಯೋಜನೆ ಇಲ್ಲಿನ ವಿದ್ಯಾರ್ಥಿಗಳದ್ದು.